ಜೋಯಿಡಾ : ಜೋಯಿಡಾ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘ ಜೋಯಿಡಾ ಹಾಗೂ ತಿನೈಘಾಟ್ ಅರಣ್ಯ ಇಲಾಖೆ ಸಹಯೋಗದಲ್ಲಿ ತಿನೈಘಾಟ್ ನಲ್ಲಿ ಗಿಡ ನೆಡುವ ಮೂಲಕ ಪತ್ರಿಕಾ ದಿನಾಚರಣೆ ಮತ್ತು ವನಮಹೊತ್ಸವ ಕಾರ್ಯಕ್ರಮವನ್ನು ಇಂದು ಭಾನುವಾರ ಸಂಜೆ ಆಚರಿಸಲಾಯಿತು.
ಜೋಯಿಡಾ ಸಿಪಿಐ ನಿತ್ಯಾನಂದ ಪಂಡಿತ್ ಗಿಡ ನೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಪತ್ರಕರ್ತರು ಸಮಾಜದ ಅಂಕುಡೊಂಕುಗಳನ್ನು ತಮ್ಮ ಲೇಖನಿಯ ಮೂಲಕ ಸರಿಪಡಿಸುತ್ತಾರೆ, ಸಮಾಜದಲ್ಲಿ ನಡೆಯುವ ಅನ್ಯಾಯಕ್ಕೆ ಧ್ವನಿ ಎತ್ತುವವರು ಪತ್ರಕರ್ತರು. ಜೋಯಿಡಾದಂತಹ ಹಳ್ಳಿಗಾಡಿನ ಪ್ರದೇಶದಲ್ಲಿ ಪತ್ರಕರ್ತರ ಪಾತ್ರ ಬಹಳ ಮುಖ್ಯವಾಗಿದೆ. ಜೋಯಿಡಾ ತಾಲೂಕಿನ ಅಭಿವೃದ್ಧಿಗೆ ಪತ್ರಕರ್ತರ ಸಹಕಾರ ಬಹು ಮುಖ್ಯವಾಗಿದೆ ಎಂದರು.
ತಿನೈಘಾಟ್ ಅರಣ್ಯ ವಲಯದ ವಲಯಾರಣ್ಯಾಧಿಕಾರಿ ವಿನಯ ಭಟ್ ಅವರು ಮಾತನಾಡಿ ಪತ್ರಿಕಾ ದಿನಾಚರಣೆಯನ್ನು ವನಮಹೋತ್ಸವ ಮಾಡುವ ಮೂಲಕ ಆಚರಿಸುತ್ತಿರುವುದು ಸಂತಸದ ಸಂಗತಿ. ಈ ಬಾರಿ ನಮ್ಮ ತಿನೈಘಾಟ್ ವಲಯದಲ್ಲಿ ವನಮಹೋತ್ಸವದ ಅಂಗವಾಗಿ 2 ಲಕ್ಷಕ್ಕಿಂತ ಹೆಚ್ಚಿನ ಗಿಡಗಳನ್ನು ನೆಡಲಾಗಿದೆ, ಪತ್ರಕರ್ತರು ನಮ್ಮ ಅರಣ್ಯ ಇಲಾಖೆ ಸಹಯೋಗದಲ್ಲಿ ಗಿಡ ನೆಟ್ಟು ವನಮಹೋತ್ಸವ ಮಾಡುತ್ತಿರುವುದು ಉತ್ತಮ ಬೆಳವಣಿಗೆ, ಪತ್ರಕರ್ತರು ಕಾಡಿನ ರಕ್ಷಣೆ ಬಗ್ಗೆ ತಮ್ಮ ವರದಿ ಮೂಲಕ ಗಮನ ಸೆಳೆಯಬೇಕು ಎಂದರು.
ಜೋಯಿಡಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ದೇಸಾಯಿ ಮಾತನಾಡಿ ಪತ್ರಕರ್ತರ ಕಷ್ಟ ಮತ್ತು ಪತ್ರಕರ್ತರಾದವರು ಸಮಾಜದಲ್ಲಿ ನಿಷ್ಪಕ್ಷಪಾತ ವರದಿ ಮಾಡುವ ಮೂಲಕ ಹೇಗೆ ಕೆಲಸ ಮಾಡಬೇಕು ಎಂಬುದನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ .ಜಿ.ಪಂ ಸದಸ್ಯ ಸಂಜಯ ಹಣಬರ, ಅಖೇತಿ ಗ್ರಾ.ಪಂ ಸದಸ್ಯ ಗುರಪ್ಪ ಹಣಬರ,ಜಿಲ್ಲಾ ಪತ್ರಕರ್ತರ ಸಂಘದ ಸಹ ಕಾರ್ಯದರ್ಶಿ ಅನಂತ ದೇಸಾಯಿ, ತಾಲೂಕಾ ಸಂಘದ ಹರೀಶ್ ಭಟ್ಟ, ಸುಭಾಷ ಗಾವಡಾ, ತಿಮ್ಮಪ್ಪ ದೇಸಾಯಿ, ಜ್ಞಾನೇಶ್ವರ ದೇಸಾಯಿ, ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಊರ ನಾಗರಿಕರು ಉಪಸ್ಥಿತರಿದ್ದರು.