ದಾಂಡೇಲಿ : ಸರ್ವಧರ್ಮ ಸಮನ್ವಯತೆಯ ನಗರವಾದ ದಾಂಡೇಲಿಯಲ್ಲಿ ಎಲ್ಲ ಧರ್ಮಿಯರ ಹಬ್ಬ ಹರಿದಿನಗಳನ್ನು ಎಲ್ಲಾ ಧರ್ಮಿಯರು ಪರಸ್ಪರ ಸಂಭ್ರಮ, ಸಡಗರದಿಂದ ಆಚರಿಸಿಕೊಂಡು ಬರುತ್ತಿರುವುದು ಇಲ್ಲಿಯ ವಾಡಿಕೆಯಾಗಿಯೆ ಬೆಳೆದು ಬಂದಿದೆ.
ಸರ್ವಧರ್ಮ ಸಮನ್ವಯತೆಗೆ ಪ್ರತೀಕ ಎಂಬಂತೆ ಹಳೆದಾಂಡೇಲಿಯ ಯಲ್ಲಮ್ಮ ನಿಂಗಪ್ಪ ತೇರದಾಳ ಅವರ ಮನೆಯಲ್ಲಿ ಕಳೆದ ಅನೇಕ ವರ್ಷಗಳಿಂದ ಮೊಹರಂ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಇಲ್ಲಿ ವರ್ಷದ ಹನ್ನೆರಡು ತಿಂಗಳು ಪಂಜವನ್ನು ಇಟ್ಟು ಆರಾಧಿಸಲಾಗುತ್ತಿದೆ. ಇಲ್ಲಿ ಈ ಕಾರ್ಯಕ್ಕೆ ಅಕ್ಕಪಕ್ಕದ ಜನರು ಸಹಾಯ ಮಾಡುವ ಮೂಲಕ ಊರ ಹಬ್ಬವನ್ನಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಇನ್ನೂ ಪಂಜ ಇಟ್ಟಿರುವ ಇನ್ನೊಂದು ಮಗ್ಗುಲಲ್ಲಿ ಯಲ್ಲಮ್ಮ ದೇವಿಯನ್ನು ಪೂಜಿಸಿಕೊಂಡು ಬರಲಾಗುತ್ತಿದೆ. ಹಿಂದೂ ಧರ್ಮಿಯವರಾದರೂ ಆಚರಣೆಗೆ ಮತ್ತು ಭಕ್ತಿಗೆ ಎಂದು ಧರ್ಮ, ಜಾತಿ ಅಡ್ಡ ಬರುವುದಿಲ್ಲ ಎನ್ನುವುದಕ್ಕೆ ಯಲ್ಲಮ್ಮ ನಿಂಗಪ್ಪ ತೇರದಾಳ ಅವರ ಮನೆಯಲ್ಲಿ ವರ್ಷಾನುವರ್ಷ ನಡೆಯುತ್ತಿರುವ ಮೊಹರಂ ಆಚರಣೆಯೆ ಸಾಕ್ಷಿ.