ಕುಮಟಾ : ಇದು ರುದ್ರ ರಮಣೀಯ ನಡುಗಡ್ಡೆಯ ಪ್ರದೇಶ. ಅಘನಾಶಿನಿ ನದಿಯ ಸೆರಗಿನ ಮಧ್ಯದಲ್ಲಿರುವ ಹೃನ್ಮನ ಸೆಳೆಯುವ ಜಾಗ. ಆದರೆ ಈ ನಡುಗಡ್ಡೆಯಲ್ಲಿ ವಾಸಿಸುವ ಜನರಿಗೆ ಪ್ರವಾಹದ ಭೀತಿ, ಕರೆಂಟ್ ಸಮಸ್ಯೆ, ತುಂಬು ಮಳೆಗಾಲದಲ್ಲೂ ನೀರಿಗೆ ಬರ. ನೋಡಲು ಸಂಪದ್ಭರಿತವಾಗಿ, ಪ್ರಕೃತಿಯ ಮಡಿಲಲ್ಲಿ ಹಸಿರಾಗಿ ಕಂಡರೂ ಸಮಸ್ಯೆಗಳ ಆಗರ ಈ ಪ್ರದೇಶ.
ಇಂತದ್ದೊಂದು ಪ್ರದೇಶ ಇರುವುದು ಕುಮಟಾ ತಾಲೂಕಿನಲ್ಲಿ.. ಕೋಡಕಣಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ “ಐಗಳ ಕುರ್ವೆ” ಎಂಬ ಗ್ರಾಮವೇ ಈ ನಡುಗಡ್ಡೆಯ ಕುಗ್ರಾಮ. ಇಲ್ಲಿ ಅಘನಾಶಿನಿ ನದಿ ಸುತ್ತಲೂ ಹರಿಯುತ್ತಾ ಸಾಗಿ, ಸಮುದ್ರವನ್ನು ಸೇರುತ್ತದೆ. ಕೋಡಕಣಿ ಗ್ರಾಮದಿಂದ ಸುಮಾರು ಒಂದು ಕಿ.ಮೀ ನಡೆದು ಹೋದರೆ ನದಿಯ ದಡ ಸಿಗುತ್ತದೆ. ಅಲ್ಲಿಂದ ಆಚೆ ದಡದಲ್ಲಿರುವ ಈ ಗ್ರಾಮಕ್ಕೆ ಮೊದಲು ದೋಣಿಯಲ್ಲಿ ದಾಟಬೇಕಾಗಿತ್ತು. ಇದೀಗ ಈ ವರ್ಷ ಸೇತುವೆ ವ್ಯವಸ್ಥೆಯಾಗಿದೆ. ಅದೂ ಕೂಡ ಸಂಪೂರ್ಣವಾಗಿಲ್ಲ. ಅಂತೂ ಜನರು ದೋಣಿಯಿಲ್ಲದೇ ಸೇತುವೆಯ ಮೇಲೆ ನಡೆದು ಅಥವಾ ಬೈಕ್ ನಲ್ಲಿ ಆಚೆ ದಡಕ್ಕೆ ಸಾಗಬಹುದು ಅಷ್ಟರ ಮಟ್ಟಿಗೆ ಮಾತ್ರ ವ್ಯವಸ್ಥೆಯಾಗಿದೆ. ಈ ನಡುಗಡ್ಡೆಯಲ್ಲಿ ಸುಮಾರು 200 ಕುಟುಂಬಗಳು ವಾಸವಾಗಿವೆ. 7 ನೇ ತರಗತಿಯವರೆಗೆ ಸರ್ಕಾರಿ ಶಾಲೆಯಿದೆ. ಮೊದಲೇ ನಡುಗಡ್ಡೆಯಾದ್ದರಿಂದ ಮಳೆಗಾಲದಲ್ಲಿ ಪ್ರವಾಹದ ಭೀತಿಯಂತೂ ಸಾಮಾನ್ಯ. ಅಘನಾಶಿನಿ ಉಕ್ಕಿ ಹರಿದು ಮನೆ-ಮನೆಗಳಲ್ಲೂ ನೀರು ತುಂಬಿ ಜನರು ಪರಿಪಾಡು ಪಡುವುದು ಪ್ರತೀ ವರ್ಷ ಇದ್ದದ್ದೇ.. ಬೇಸಿಗೆ ಸಂದರ್ಭದಲ್ಲಿ ಇದಕ್ಕೆ ಸಮುದ್ರದ ನೀರು ಸೇರುವುದರಿಂದ ಈ ನದಿಯ ನೀರು ಪೂರ್ತಿ ಉಪ್ಪಾಗಿ, ಯಾವುದಕ್ಕೂ ಬಳಸಲು ಸಾಧ್ಯವಾಗುವುದಿಲ್ಲ. ಮಳೆಗಾಲದಲ್ಲಿ ನೀರು ಸಿಹಿಯಾಗಿದ್ದರೂ, ಕಲುಷಿತಗೊಳ್ಳುವುದರಿಂದ ಉಪಯೋಗಿಸಲು ಸಾಧ್ಯವಾಗದು. ಕೋಡಕಣಿ ಗ್ರಾಮದಿಂದ ಈ ಗ್ರಾಮಕ್ಕೆ ಕುಡಿಯುವ ನೀರನ್ನು ನಳದ ಮೂಲಕ ವ್ಯವಸ್ಥೆಯನ್ನೇನೋ ಮಾಡಿದ್ದಾರೆ. ಆದರೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಈ ಗ್ರಾಮದ ಗದ್ದೆಯ ನಡುವಲ್ಲಿ ಒಂದು ಸಿಹಿ ನೀರಿನ ಬಾವಿಯಿದೆ. ಅದೇ ಈ ಗ್ರಾಮದ ಎಲ್ಲಾ ಮನೆಗಳಿಗೆ ಕುಡಿಯುವ ನೀರಿಗೆ ಆಧಾರ. ಈಗಲೂ ಅಲ್ಲಿನ ಜನರು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಶಾಲೆಯ ಮಕ್ಕಳಿಗೆ ಬಿಸಿಯೂಟಕ್ಕೆ ಅಡಿಗೆ ಮಾಡಲು ನೀರಿನ ಸಮಸ್ಯೆ. ಮಳೆಗಾಲದಲ್ಲಿ ಕಲುಷಿತಗೊಂಡ ಅಘನಾಶಿನಿ ನದಿಯ ನೀರಿನಿಂದ ಅಡಿಗೆ ಮಾಡುವುದು ಹೇಗೆ ಎಂಬುದು ಇಲ್ಲಿನ ಜನರ ಪ್ರಶ್ನೆ.
ಇವಿಷ್ಟೇ ಅಲ್ಲ. ಕರೆಂಟ್ ಸಮಸ್ಯೆಯಂತೂ ಯಾವಾಗಲೂ ಇಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಇಲ್ಲಿ ಕರೆಂಟ್ ಕಂಬ, ಲೈನ್ ಎಲ್ಲವೂ ಇದೆ ಆದರೆ ಯಾವುದೂ ಸಮರ್ಪಕವಾಗಿಲ್ಲ.. ಪಂಚಾಯ್ತಿ ವತಿಯಿಂದ ಬೀದಿ ದೀಪ ಹಾಕಿದ್ದಾರೆ ಆದರೆ ಕರೆಂಟ್ ಮಾತ್ರ ಇಲ್ಲ.. ಇದರ ಜೊತೆ ಪ್ರವಾಹ ಬಂದರೆ ಇವರ ಜೀವನಾಧಾರವಾಗಿರುವ ಗದ್ದೆಗಳಲ್ಲೆಲ್ಲಾ ನೀರು ತುಂಬಿ ಬೆಳೆ ಬೆಳೆಯುವುದು ಕಷ್ಟವಾಗುತ್ತದೆ.ಈ ಮೊದಲು ಇಲ್ಲಿಯ ಜನರು ದೋಣಿಯ ಮೂಲಕ ನದಿ ದಾಟುವ ಕಷ್ಟವಿತ್ತು. ಕಳೆದ ನಾಲ್ಕು ವರ್ಷಗಳ ಹಿಂದೆ ಶಾರದಾ ಶೆಟ್ಟಿಯವರು ಈ ಭಾಗದ ಶಾಸಕರಾಗಿದ್ದಾಗ ಇಲ್ಲಿ ಸೇತುವೆಯನ್ನು ಮಂಜೂರಾತಿ ಮಾಡಿಸಿದ್ದರು. ಅಂತೂ ಈ ವರ್ಷ ಸೇತುವೆಯನ್ನೇನೋ ಮಾಡಿದ್ದಾರೆ, ಅದೂ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಮುಗಿದಿಲ್ಲ. ಇವೆಲ್ಲ ಈ ವರ್ಷ ಮಾತ್ರ ಇರುವ ಸಮಸ್ಯೆಯಲ್ಲ, ಹಲವಾರು ವರ್ಷಗಳಿಂದ ಇಲ್ಲಿನ ಜನರು ಅನುಭವಿಸುತ್ತಿರುವ ಪರಿಪಾಟಲು.ಇದರ ಕುರಿತು ಇಲ್ಲಿನ ಸ್ಥಳೀಯರು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೂ ಸಾಕಷ್ಟು ಸಲ ತಂದಿದ್ದಾರೆ. ಹಲವಾರು ಪತ್ರಿಕೆ, ನ್ಯೂಸ್ ಚಾನೆಲ್ ಗಳ ಮುಖಾಂತರವೂ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತರಲು ಪ್ರಯತ್ನಿಸಿದ್ದಾರೆ ಆದರೆ ಯಾವ ಪ್ರಯೋಜನವೂ ಆಗಿಲ್ಲ.
ಇದರ ಕುರಿತು ನಮ್ಮ ನುಡಿ ಸಿರಿ ವಾಹಿನಿಯೊಂದಿಗೆ ತಮ್ಮ ಕಷ್ಟದ ಅಳಲನ್ನು ಹೇಳಿಕೊಂಡ ಇಲ್ಲಿಯ ಸ್ಥಳೀಯರು, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರೂ ಆದ ಸುಬ್ರಾಯ್ ಅವರು, “ನಮಗೆ ಮೊದಲು ಕುಡಿಯುವ ನೀರಿನ ಸಮಸ್ಯೆ, ಹಾಗೂ ಕರೆಂಟ್ ವ್ಯವಸ್ಥೆಯನ್ನು ಸರಿ ಮಾಡಿಕೊಡಿ. ನಾವು ಇದರ ಕುರಿತು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದೇವೆ, ನಮ್ಮ ಕಷ್ಟವನ್ನು ಹೇಳಿಕೊಂಡಿದ್ದೇವೆ. ಆದರೂ ಯಾವುದೂ ಸರಿಯಾಗಿಲ್ಲ. ನಮಗಂತೂ ನಂಬಿಕೆಯೇ ಹೊರಟು ಹೋಗಿದೆ. ಆದಷ್ಟು ಬೇಗ ನಮ್ಮ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಪರಿಹಾರ ದೊರಕಿಸಿಕೊಡಿ..” ಎಂದು ಹತಾಶೆಯಿಂದ ನುಡಿದಿದ್ದಾರೆ. ಅಲ್ಲಿನ ಜನರ ಕಣ್ಣಲ್ಲಿ, ಈ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂಬ ಕಿಂಚಿತ್ತು ಆಶಾ ಭಾವನೆಯೂ ಇಲ್ಲದಿರುವುದು ಮಾತ್ರ ವಿಷಾದನೀಯ. ಸಂಬಂಧಪಟ್ಟ ಅಧಿಕಾರಿಗಳೂ ಇಲ್ಲಿನ ಜನರ ಸಮಸ್ಯೆಗೆ ಬೇಗ ಸ್ಪಂದಿಸಿ, ಪರಿಹಾರ ದೊರಕಿಸಿಕೊಡಬೇಕೆಂಬುದೇ ನುಡಿಸಿರಿ ವಾಹಿನಿಯ ಮುಖ್ಯ ಆಶಯ..