ಜೋಯಿಡಾ : ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ಬರುವ ಪ್ರದೇಶಗಳಲ್ಲಿ ಜೋಯಿಡಾ ತಾಲ್ಲೂಕಿನ ಕ್ಯಾಸಲ್ ರಾಕ್, ಗಣೇಶಗುಡಿ, ಅನ್ಮೋಡ ಅತೀ ಪ್ರಮುಖ ಪ್ರದೇಶಗಳಾಗಿವೆ. ಕಳೆದ ಒಂದು ವಾರದಿಂದ ಎಡೆಬಿಡದೇ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಗಣೇಶಗುಡಿ – ಅನ್ಮೋಡ ಮಾರ್ಗದ ವಿದ್ಯುತ್ ಟವರ್ ಅನ್ಮೋಡದಲ್ಲಿ ಬಿದ್ದು, ಸಂಪೂರ್ಣ ಜಲಾವೃತಗೊಂಡಿದ್ದು, ಇದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ಹಾಗೆಂದೂ ದುರಸ್ತಿ ಮಾಡಲು ಅಲ್ಲಿ ತೆರಳಬೇಕಾದರೇ ಟವರ್ ಇರುವ ಎರಡ್ಮೂರು ಕಿ.ಮೀ ವರೆಗೆ ನೀರು ತುಂಬಿಕೊಂಡಿದ್ದರಿಂದ ಅಲ್ಲಿಗೆ ಹೋಗಿ ದುರಸ್ತಿ ಮಾಡುವುದು ಕಷ್ಟಸಾಧ್ಯವಾಗಿತ್ತು. ಅಂತಿಮವಾಗಿ ಪ್ರವಾಸೋದ್ಯಮಿ ರವಿಕುಮಾರ್.ಜಿ.ನಾಯಕ ಅವರು ರ್ಯಾಪ್ಸ್ ಮತ್ತು ನುರಿತ ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಿಕೊಟ್ಟು ದುರಸ್ತಿಗೆ ಸಹಕರಿಸಿದ್ದರು. ಹೆಸ್ಕಾಂ ದಾಂಡೇಲಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ಪುರುಷೋತ್ತಮ ಮಲ್ಯ ಅವರ ಮಾರ್ಗದರ್ಶನದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ದೀಪಕ್ ನಾಯಕ ಅವರ ಸಹಕಾರದಲ್ಲಿ ಹೆಸ್ಕಾಂನ ಕಿರಿಯ ಅಭಿಯಂತರರಾದ ಜೈನುದ್ದೀನ್ ರೋಣ ಅವರ ನೇತೃತ್ವದಲ್ಲಿ 10 ಜನ ಸಿಬ್ಬಂದಿಗಳು ಬಿದ್ದು ಜಲಾವೃತಗೊಂಡಿದ್ದ ವಿದ್ಯುತ್ ಟವರ್ ಇದ್ದ ಸ್ಥಳಕ್ಕೆ ರ್ಯಾಪ್ಟ್ ಮೂಲಕ ಸಾಗಿ ದುರಸ್ತಿ ಕಾರ್ಯವನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶೀಘ್ರಗತಿಯಲ್ಲಿ ದುರಸ್ತಿ ಕಾರ್ಯವನ್ನು ಮಾಡಿ ಇಲಾಖೆಯ ಘನತೆಯನ್ನು ಹೆಚ್ಚಿಸಿದ ಕಿರಿಯ ಅಭಿಯಂತರರಾದ ಜೈನುದ್ದೀನ್ ರೋಣ ಅವರನ್ನು ಹಾಗೂ ಅವರ ನೇತೃತ್ವದ ಸಿಬ್ಬಂದಿಗಳ ಕಾರ್ಯಕ್ಕೆ ಕಾರ್ಯನಿರ್ವಾಹಕ ಅಭಿಯಂತರರಾದ ಪುರುಷೋತ್ತಮ ಮಲ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.