ಒಡೆದ ಕೇರವಾಡದ ಕೆರೆ : ಹಲವು ಮನೆಗಳಿಗೆ ನುಗ್ಗಿದ ನೀರು : ಹಾಲಮಡ್ಡಿ-ಕೇರವಾಡ ರಸ್ತೆ ಸಂಪರ್ಕ ಕಡಿತ

ದಾಂಡೇಲಿ : ಯಾವುದೇ ಸಂದರ್ಭದಲ್ಲಿ ಒಡೆಯಬಹುದಾದ ಸಾಧ್ಯತೆಯಿದ್ದ ದಾಂಡೇಲಿ ತಾಲ್ಲೂಕಿನ ಕೇರವಾಡದ ಕೆರೆ ಮಂಗಳವಾರ ರಾತ್ರಿ ಒಡೆದಿದೆ. ಕೆರೆ ಒಡೆದ ಪರಿಣಾಮವಾಗಿ ಸರಿ ಸುಮಾರು 40 ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಇದರ ನಡುವೆ ಒಮ್ಮೇಲೆ ರಭಸವಾಗಿ ಬಂದ ನೀರಿನ ಸೆಳೆತಕ್ಕೆ ಓರ್ವ ಮಹಿಳೆ ಮತ್ತು ಮೂವರು ಮಕ್ಕಳು ಹಾಗೂ ಒಂದು ನಾಯಿ ನೀರಿನಲ್ಲಿ ಕೊಚ್ಚಿ ಹೋಗುವ ಸಾಧ್ಯತೆಯಿತ್ತಾದರೂ ಅವರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಕೇರವಾಡದ ಕೆರೆ ಯಾವುದೇ ಪರಿಸ್ಥಿತಿಯಲ್ಲಿ ಒಡೆದು ಹೋಗುವ ಸಾಧ್ಯತೆಯಿರುವ ಹಿನ್ನಲೆಯಲ್ಲಿ ತಾಲ್ಲೂಕಾಡಳಿತದ ನೇತೃತ್ವದಲ್ಲಿ ಕಳೆದೆರಡು ದಿನಗಳ ಹಿಂದ ಕೆರೆಗೆ ಸಂಬಂಧಿಸಿದ ಕಾಲುವೆಯನ್ನು ಅಗಲೀಕರಣಗೊಳಿಸಲಾಗಿತ್ತು. ಅಷ್ಟಾದರೂ ಕಳೆದ ವರ್ಷದಂತೆ ಈ ವರ್ಷವೂ ಕರೆ ಒಡೆದು ಇದೀಗ ಸಾಕಷ್ಟು ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡಿದೆ.

ಘಟನೆ ನಡೆದು ಸಾಕಷ್ಟು ಸಮಯವಾದರೂ ಸ್ಥಳಕ್ಕೆ ತಾಲ್ಲೂಕು ಪಂಚಾಯ್ತು ಕಾರ್ಯನಿರ್ವಹಣಾಧಿಕಾರಿ ಮತ್ತು ಪಿಡಿಓ ಬರದೇ ಇರುವುದಕ್ಕೆ ಸ್ಥಳೀಯ ಗ್ರಾಮ ಪಂಚಾಯ್ತು ಸದಸ್ಯರಾದ ಸುಭಾಷ್ ಬೋವಿವಡ್ಡರ್ ಸೇರಿದಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾನಿ ಸಂಭವಿಸಿದ ಕುಟುಂಬಗಳಿಗೆ ತಕ್ಷಣವೆ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸ್ಥಳದಲ್ಲಿ ಗ್ರಾಮ ಪಂಚಾಯ್ತಿಯ ಸ್ಥಳೀಯ ಸದಸ್ಯರು, ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸೈ ಕೃಷ್ಣ ಗೌಡ ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿ ಮುಕ್ಕಾಂ ಹೂಡಿದ್ದಾರೆ.