ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ರೈತರ ಗದ್ದೆಗಳಲ್ಲಿ ಒಂಟಿ ಸಲಗವೊಂದು ಓಡಾಡಿದ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಪಕ್ಕಿರಪ್ಪ ಬೋಕೆ ಹಾಗೂ ಬಸವಂತಪ್ಪ ಬೋಕೆ ಅವರ ಭತ್ತದ ಗದ್ದೆಯಲ್ಲಿ ಆನೆ ಓಡಾಡಿದ್ದು ಬೆಳೆಯನ್ನ ಹಾಳು ಮಾಡಿದೆ.
ಗುರುವಾರ ರಾತ್ರಿಯಿಡೀ ಕಾಡಾನೆ ಸನವಳ್ಳಿ ಗ್ರಾಮದ ಗದ್ದೆಗಳಲ್ಲಿ ಓಡಾಡಿದೆ. ಬೆಳಿಗ್ಗೆ ಆರು ಗಂಟೆ ಸುಮಾರಿಗೆ ರೈತರು ತಮ್ಮ ಹೊಲಕ್ಕೆ ತೆರಳಿದಾಗ ಆನೆಯ ಹೆಜ್ಜೆಗಳನ್ನು ನೋಡಿ ಗಲಿಬಿಲಿಗೊಂಡಿದ್ದಾರೆ.
ಕಾಡಾನೆ ಹತ್ತಿರದ ಅರಣ್ಯದಲ್ಲಿ ಇರುವ ಸಾಧ್ಯತೆ ಇದ್ದು ಮತ್ತೆ ಗದ್ದೆಗಳಿಗೆ ಬರದಂತೆ ಕ್ರಮ ಕೈಗೊಳ್ಳಿ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಆಗ್ರಹ ಮಾಡಿದ್ದಾರೆ. ಬೆಳಿಗ್ಗೆ ಆರು ಗಂಟೆಯಿಂದ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಇನ್ನೂ ತನಕ ಕಾಲ್ ರಿಸೀವ್ ಮಾಡಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಗಳ ನಿರ್ಲಕ್ಷ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇಷ್ಟು ವರ್ಷದಲ್ಲಿ ನಮ್ಮ ಗ್ರಾಮದ ಸುತ್ತಮುತ್ತಲಿನ ಅರಣ್ಯದಲ್ಲಿ ಹಾಗೂ ಗ್ರಾಮದ ಗದ್ದೆಯಲ್ಲಿ ಕಾಡಾನೆ ಇದೇ ಮೊದಲ ಬಾರಿ ಕಾಣಿಸಿಕೊಂಡಿದೆ. ಆದ್ದರಿಂದ ಎಲ್ಲಿ ಆನೆಗಳ ಹಿಂಡು ಗದ್ದೆಗಳಿಗೆ ಬಂದು ಬೆಳೆ ಹಾನಿ ಮಾಡುತ್ತವೆಯೋ ಎಂಬ ಭಯದ ವಾತಾವರಣ ಸೃಷ್ಟಿಯಾಗಿದೆ. ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿ ಐದು ಗಂಟೆಗಳಾದರೂ ಯಾರೊಬ್ಬರೂ ಸ್ಥಳಕ್ಕೆ ಆಗಮಿಸಿಲ್ಲ ಎಂದು ಸ್ಥಳಿಯ ರೈತ ರಾಜು ಗುಬ್ಬಕ್ಕನವರ ಬೇಸರ ವ್ಯಕ್ತಪಡಿಸಿದರು.