ಭಟ್ಕಳ: ರಾಜ್ಯ ಸರ್ಕಾರ ನಿಗಮಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಮೊನ್ನೆಯಷ್ಟೇ ಆಯ್ಕೆ ಪ್ರಕ್ರಿಯೆ ನಡೆಸಿ ಆದೇಶ ಹೊರಡಿಸಿದೆ. ಖುಷಿಯ ವಿಚಾರ ಏನಪ್ಪಾ ಅಂದ್ರೆ ಈ ಬಾರಿ ಉತ್ತರ ಕನ್ನಡ ಜಿಲ್ಲೆಯ ಕಟ್ಟಾ ಹಿಂದುತ್ವವಾದಿ ಗೋವಿಂದ್ ನಾಯ್ಕ್ ಅವರಿಗೆ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಪಟ್ಟ ಒಲಿದು ಬಂದಿದೆ. ಕಾರ್ಯಕರ್ತರಿಂದ ‘ಗೋವಿಂದಣ್ಣ’ ಎಂದೇ ಕರೆಸಿಕೊಳ್ಳುವ ಗೋವಿಂದ್ ನಾಯ್ಕ್ ಅವರು ಇಂದು ಮಲ್ಲೆಶ್ವರಂನ ಕೇಂದ್ರ ಕಛೇರಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಗೊವಿಂದ ನಾಯ್ಕ ಅಧ್ಯಕ್ಷರಾಗಿ ನಿಯೋಜನೆಗೊಂಡ ಬಗ್ಗೆ ಅವರ ಅಭಿಮಾನಿ ಬಳಗ ಹಾಗೂ ಪಕ್ಷದ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದು ಅನೇಕ ಯುವಕರಿಗೆ ಸ್ಪೂರ್ತಿಯ ಚಿಲುಮೆಯಾದ ಗೋವಿಂದಣ್ಣ ಅವರಿಗೆ ಈ ಹುದ್ದೆ ಸಿಕ್ಕಿರುವುದು ಅಭಿಮಾನಿಗಳಿಗೆ ಸಂತಸ ಉಂಟು ಮಾಡಿದೆ. ಅಲ್ಲದೇ ಪ್ರಖರ ಹಿಂದೂವಾದಿಯಾಗಿ ಜಿಲ್ಲೆಯಲ್ಲಿ ಗುರುತಿಸಿಕೊಂಡವರು ಗೋವಿಂದ ನಾಯ್ಕ್. ಯಾವುದೇ ಹಿಂದು ಯುವಕರು ಕಷ್ಟದಲ್ಲಿದ್ದರೆ ಅಥವಾ ಪೊಲೀಸ್ ಕೇಸ್ ಹಾಗೂ ಕೋರ್ಟ್ ಕೇಸ್‌ಗಳಲ್ಲಿ ಅಲೆಯುತ್ತಿದ್ದವರಿಗೆ ಮೊದಲು ನೆನಪಾಗುವುದೇ ಗೋವಿಂದಣ್ಣ. ಅಲ್ಲದೇ ಪಕ್ಷಕ್ಕಾಗಿ ಹಗಲಿರುಳೆನ್ನದೇ ತಮ್ಮ ಜೀವನವನ್ನ ಸವೆಸಿದ್ದಾರೆ. ತಮ್ಮ ಜೀವಿತಾವಧಿಯನ್ನು ಹಿಂದುತ್ವಕ್ಕಾಗಿ ಹಾಗೂ ಬಿಜೆಪಿ ಪಕ್ಷಕ್ಕಾಗಿ ಮುಡಿಪಾಗಿಟ್ಟ ಗೋವಿಂದಣ್ಣರನ್ನ ಗುರುತಿಸಿರುವುದು ಜಿಲ್ಲೆಯ ಕಾರ್ಯಕರ್ತರ ಪಾಲಿಗೆ ಸಂತಸವನ್ನುಂಟುಮಾಡಿದೆ. ಅಸಂಖ್ಯಾತ ಅಭಿಮಾನಿಗಳು ನಗರದ ಹಲವೆಡೆ ಶುಭಾಷಯಗಳನ್ನು ಕೋರಿ ಕಟೌಟ್‌ಗಳನ್ನು ಹಾಕಿದ್ದಾರೆ.
ಇತ್ತೀಚಿಗಷ್ಟೇ ಸುಮಾರು 52 ನಿಗಮ ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರ ನಾಮನಿರ್ದೇಶನವನ್ನ ರದ್ದು ಮಾಡಿ ಸರ್ಕಾರ ಆದೇಶಿಸಿತ್ತು. ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಪಕ್ಷಕ್ಕಾಗಿ ದುಡಿಯುತ್ತಿರುವವರಿಗೆ ಅವಕಾಶ ಕಲ್ಪಿಸುವಂತೆ ಆರ್‌ಎಸ್‌ಎಸ್ ಸೂಚಿಸಿತ್ತು. ಹೀಗಾಗಿ ಬೊಮ್ಮಾಯಿ ನೇತೃತ್ವದ ಸರ್ಕಾರ ಪಕ್ಷಕ್ಕೆ ನಿಷ್ಠರಾಗಿ ದುಡಿದ ಮುಖಂಡರನ್ನ ಗುರುತಿಸಿ ಮಣೆಹಾಕಿದೆ.
2013ರ ಚುನಾವಣೆಯಲ್ಲಿ ಭಟ್ಕಳ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೋವಿಂದ ನಾಯ್ಕ ಸೋಲನ್ನ ಕಂಡಿದ್ದರು. ಭಟ್ಕಳದಲ್ಲಿ ಪಕ್ಷ ಸಂಘಟನೆಗೆ ಗೋವಿಂದ ನಾಯ್ಕರ ಕೊಡುಗೆ ಅಪಾರ. ಹೀಗಾಗಿ ಅವರಿಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿತ್ತು.
ಕಳೆದ ಬಾರಿ ಪರಿಷತ್ ಚುನಾವಣೆಯಲ್ಲೂ ಗೋವಿಂದ ನಾಯ್ಕರಿಗೆ ಟಿಕೇಟ್ ಸಿಗಬಹುದು ಎನ್ನಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪಿತ್ತು. ಹೀಗಾಗಿ ಕಾರ್ಯಕರ್ತರು ನಿರಾಸೆಗೊಂಡಿದ್ದರು. ಇದೀಗ ನಿಗಮ ಮಂಡಳಿಯಲ್ಲಿ ಅವಕಾಶ ನೀಡಿದ್ದು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಇನ್ನು ಈ ಸಮಿತಿಯಲ್ಲಿ ಐಎಫ್‌ಎಸ್ ದರ್ಜೆಯ ಅಧಿಕಾರಿಯೊಬ್ಬರು ಸೆಕ್ರೇಟರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.