ಅಡಿಕೆ ಕಳ್ಳನ ಬಂಧನ: 2 ಲಕ್ಷದ 50 ಸಾವಿರ ರೂಪಾಯಿ ಮೌಲ್ಯದ ಅಡಿಕೆ ಜಪ್ತಿ

ಮುಂಡಗೋಡ: ಅಡಿಕೆ ಕಳ್ಳತನ ಮಾಡಿ ತೋಟದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಮುಂಡಗೋಡದಲ್ಲಿ ನಡೆದಿದೆ. ಬಂಧಿತನಿಂದ 2 ಲಕ್ಷದ 50 ಸಾವಿರ ರೂಪಾಯಿ ಮೌಲ್ಯದ ಅಡಿಕೆಯ 20 ಮೂಟೆಗಳು ಹಾಗೂ ಟಾಟಾ ಇಂಟ್ರಾ ಗೂಡ್ಸ್ ವಾಹನ, ಅಶೋಕ ಲೈಲೆಂಡ್ ಮಿನಿ ಗೂಡ್ಸ್ ವಾಹನಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಕೊಪ್ಪಾ ಇಂದಿರಾನಗರ ಗ್ರಾಮದ ಪಕ್ಕಿರೇಶ ದೊಡ್ಮನಿ ಬಂಧಿತ ಆರೋಪಿ.

ಘಟನೆ ವಿವರ:

ಪಕ್ಕಿರೇಶ ದೊಡ್ಮನಿ ಜೂನ್ 27 ರಂದು ಹಳೂರ ಓಣಿಯ ಹಾಗೂ ಕಲಘಟಗಿ ರಸ್ತೆಯಲ್ಲಿರುವ ತೋಟದ ಮನೆಯಲ್ಲಿದ್ದ ಅನಿಲ್ ಕಾಮತ್ ಹಾಗೂ ನವೀನ್ ಹುದ್ಲಮನಿ ಅವರ ಅಡಿಕೆಯನ್ನು ಕಳ್ಳತನ ಮಾಡಿ ಅಡಿಕೆಯನ್ನು ವಾಹನದಲ್ಲಿ ಸಾಗಿಸಿದ್ದಾನೆ. ಎರಡು ಮೂರು ದಿನಗಳ ನಂತರ ತನ್ನ ಸ್ನೇಹಿತನ ಹತ್ತಿರ ನಾನು ಅಡಿಕೆ ವ್ಯಾಪಾರ ಮಾಡುತ್ತೇನೆ ಎಂದು ಹೇಳಿ ಕರೆದುಕೊಂಡು ಹೋಗಿ ಯಲ್ಲಾಪುರದ ಗಣೇಶ ಪ್ರಸಾದ್ ಟ್ರೇಡರ್ಸ ಅವರಿಗೆ ಮಾರಾಟ ಮಾಡಿದ್ದಾನೆ. ಬಂದ ಹಣದಿಂದ 80 ಸಾವಿರ ರೂ ನೀಡಿ ಉಳಿದ ಹಣಕ್ಕೆ ಫೈನಾನ್ಸನಲ್ಲಿ ಕಂತು ಮೂಲಕ ಸಾಲಮಾಡಿ ಹೊಸ ಅಶೋಕ್ ಲೈಲೆಂಡ್ ಮಿನಿ ಗೂಡ್ಸ್ ಖರೀದಿ ಮಾಡಿದ್ದ ಎಂದು ತನಿಖೆ ವೇಳೆ ಪೊಲೀಸರಿಗೆ ಬಾಯಿ ಬಿಟ್ಟಿದ್ದಾನೆ.

ಬಂಧಿತ ಆರೋಪಿಯಿಂದ ಎರಡು ಲಕ್ಷ ಐವತ್ತು ಸಾವಿರ ರೂಪಾಯಿ ಮೌಲ್ಯದ ಅಡಿಕೆಯ ಮೂಟೆಗಳು ಹಾಗೂ ಕಳ್ಳತನಕ್ಕೆ ಬಳಸಿದ ಟಾಟಾ ಇಂಟ್ರಾ ಗೂಡ್ಸ್ ವಾಹನ, ಅಶೋಕ ಲೈಲೆಂಡ ಮಿನಿ ಗೂಡ್ಸ್ ವಾಹನ ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೆಕರ್, ಹೆಚ್ಚುವರಿ ಎಸ್.ಪಿ ಎಸ್ ಬದರಿನಾಥ, ಡಿ.ವೈ.ಎಸ್.ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಸಿದ್ದಪ್ಪ ಸಿಮಾನಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ಕೈ ಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.