ಕಾರವಾರ: ಬಿಜೆಪಿ ಯುವ ಮೋರ್ಚಾ ಮುಖಂಡ ಸುಳ್ಯ ತಾಲೂಕಿನ ಪ್ರವೀಣ್ ನೆಟ್ಟಾರು ಅವರ ಹತ್ಯೆಯನ್ನು ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್. ನಾಯ್ಕ ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಗುರುವಾರ ಹೇಳಿಕೆ ನೀಡಿರುವ ಅವರು ಇದೊಂದು ಹೇಯ ಕೃತ್ಯವಾಗಿದೆ. ಅಮಾಯಕರನ್ನು ಬರ್ಬರವಾಗಿ ಹತ್ಯೆ ಮಾಡುವವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುವವರಿಗೆ ತಕ್ಕ ಪಾಠ ಕಲಿಸಬೇಕು. ರಾಜ್ಯದಲ್ಲಿ ಇಂಥವರು ತಲೆಯೆತ್ತಲು ಬಿಡಬಾರದು.
ಇನ್ನು ಮುಂದೆ ಇಂತಹ ಘಟನೆಗಳಾಗದಂತೆ ಎಚ್ಚರಿಕೆ ವಹಿಸಬೇಕು. ಇಂತಹ ನೀಚ ಕೆಲಸಕ್ಕಿಳಿದ ದುಷ್ಟರು ಹಾಗೂ ಅವರಿಗೆ ಕುಮ್ಮಕ್ಕು ನೀಡುವವರನ್ನು ಕಾನೂನಿನ ಕುಣಕೆಯಲ್ಲಿ ಸಿಲುಕಿಸಬೇಕು. ನಮ್ಮ ಕಾರ್ಯಕರ್ತರು ಮತ್ತು ಅಮಾಯಕರಿಗೆ ರಕ್ಷಣೆ ದೊರೆಯಬೇಕು.
ಈ ಘಟನೆಯಿಂದ ನಮ್ಮ ಪಕ್ಷದ ಕಾರ್ಯಕರ್ತರಿಗೆ ಉಂಟಾಗಿರುವ ನೋವು, ಅವರ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದೇನೆ. ಈ ಘಟನೆ ನನ್ನನ್ನೂ ವಿಚಲಿತಳಾಗುವಂತೆ ಮಾಡಿದೆ. ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ರೂಪಾಲಿ ಎಸ್. ನಾಯ್ಕ ಹೇಳಿದ್ದಾರೆ.