ಸುರತ್ಕಲ್‌ನಲ್ಲಿ ಮುಸ್ಲಿಂ ಯುವಕನ ಬರ್ಬರ ಹತ್ಯೆ: ಶಾಲಾಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಬೆನ್ನಲ್ಲೇ ಸುರತ್ಕಲ್‌ನಲ್ಲಿ ಮತ್ತೊಬ್ಬ ಯುವಕನ ಹತ್ಯೆಯಾಗಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಮಂಗಳೂರು ಹೊರವಲಯದಲ್ಲಿರುವ ಸುರತ್ಕಲ್‌ನಲ್ಲಿ ಗುರುವಾರ ಸಂಜೆ ದುಷ್ಕರ್ಮಿಗಳು ಫಾಜಿಲ್ ಮಂಗಲಪೇಟೆ (23) ಎಂಬ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಪರಿಸ್ಥಿತಿ ಉದ್ವಿಗ್ನವಾಗಿರುವ ಕಾರಣ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವಂತೆ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರಿಗೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಜಿಲ್ಲಾಧಿಕಾರಿ ಸುರತ್ಕಲ್, ಪಣಂಬೂರು, ಬಜ್ಪೆ, ಮುಲ್ಕಿ ಸುತ್ತಮುತ್ತಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಸುರತ್ಕಲ್, ಮುಲ್ಕಿ ಪೊಲೀಸ್ ಠಾಣೆ, ಬಜ್ಪೆ, ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸುರತ್ಕಲ್‌ನ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ರಾತ್ರಿಯಿಂದಲೇ ನಿರಂತವಾಗಿ ಗಸ್ತು ತಿರುಗುತ್ತಿದ್ದಾರೆ.

ನಿಷೇಧಾಜ್ಞೆ ಹೇರಿರುವ ಸೂಕ್ಷ್ಮ ಪ್ರದೇಶಗಳಲ್ಲಿರುವ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆ ಮಾಡಬೇಡಿ ಎಂದು ಮುಸ್ಲಿಂ ಮುಖಂಡರ ಬಳಿ ಪೊಲೀಸರು ಮನವಿ ಮಾಡಿದ್ದಾರೆ. ನಿಷೇಧಾಜ್ಞೆ ಇಲ್ಲದ ಸ್ಥಳಗಳ ಮಸೀದಿಗಳಲ್ಲಿ ಅಥವಾ ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಮಾಡುವಂತೆ ಸೂಚಿಸಿದ್ದಾರೆ.

ಶಾಂತಿ ಕಾಪಾಡಲು ಸಹಕರಿಸುವಂತೆ ಪೊಲೀಸರ ಮನವಿ

ಫಾಜಿಲ್ ಹತ್ಯೆಯ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ. ಫಾಜಿಲ್‌ನನ್ನು ಯಾಕೆ ಹತ್ಯೆ ಮಾಡಲಾಗಿದೆ ಎಂದು ಇನ್ನೂ ತಿಳಿದುಬಂದಿಲ್ಲ. ಕೊಲೆ ಮಾಡಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುತ್ತೇವೆ. ಈ ಬಗ್ಗೆ ಬರುವ ಗಾಳಿ ಸುದ್ದಿ, ವದಂತಿಗಳಿಗೆ ಸಾರ್ವಜನಿಕರು ಪ್ರತಿಕ್ರಿಯಿಸಬಾರದು. ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೇಮಕ

ಇನ್ನು ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿ ಸುರತ್ಕಲ್‌ನ ಮಂಗಲಪೇಟೆಯಲ್ಲಿ ನಡೆದ ಅಮಾನುಷ ಕೊಲೆ ಘಟನೆಯನ್ನು ಉಗ್ರವಾಗಿ ಖಂಡಿಸುತ್ತೇನೆ. ದುಷ್ಕೃತ್ಯ ನಡೆಸಿದವರನ್ನು ಬಂಧಿಸಿ, ಕಾನೂನಿನ ಕ್ರಮ ಜರುಗಿಸಲು, ಪೊಲೀಸರು ಪೂರ್ಣ ಸ್ವಾತಂತ್ರ‍್ಯ ಹೊಂದಿದ್ದು, ಜನತೆ ಶಾಂತಿಯಿಂದ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಘಟನೆ ನಂತರ, ಮುನ್ನೆಚ್ಚರಿಕೆ ಕ್ರಮವಾಗಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಶಾಂತಿ ಸುವ್ಯವಸ್ಥೆ ಕಾಪಾಡಲು, ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ನಿರ್ದೇಶನ ನೀಡಲಾಗಿದೆ. ಆರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕಾನೂನನ್ನು ಕೈಗೆ ತೆಗೆದುಕೊಳ್ಳಲು ಪ್ರಯತ್ನಿಸುವ ಯಾರನ್ನೇ ಆದರೂ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಗೃಹ ಸಚಿವರು ಹೇಳಿದ್ದಾರೆ.