ಬುದ್ಧಿ ಹೇಳುವವರೇ ಬುದ್ಧಿಗೇಡಿಗಳಾದ್ರೆ.?!

ಗೋಕರ್ಣ: ನಮ್ಮ ದೇಶದಲ್ಲಿ ಗಣ್ಯರಿಗೊಂದು ಕಾನೂನು ಜನಸಾಮಾನ್ಯರಿಗೊಂದು ಕಾನೂನು ಇದ್ಯಾ.? ಇಲ್ಲಾ ತಾನೆ.! ಗೋಕರ್ಣದಲ್ಲಿ ನಡೆದ ಒಂದು ಘಟನೆ ಈ ಪ್ರಶ್ನೆ ಹುಟ್ಟುವಂತೆ ಮಾಡಿದೆ. ಅಧಿಕಾರಿಗಳ ಇಂತಹ ವರ್ತನೆಗೆ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.

ಹೌದು.! ದೇವಾಲಯಕ್ಕೆ ಗಣ್ಯರು ಬಂದರೆ ಅವರ ವಾಹನ ನಿಲ್ಲುವುದು ದೇವಸ್ಥಾನದ ಮುಂಭಾಗ ಇಕ್ಕಟ್ಟಾದ ಜಾಗದಲ್ಲಿ. ಈ ಜಾಗ ಮುಖ್ಯ ಕಡಲತೀರಕ್ಕೆ ಸಾಗುವ ಮಾರ್ಗದಲ್ಲಿಯಾಗಿದ್ದು, ನಿತ್ಯ ವಾಹನ ದಟ್ಟನೆ ಉಂಟಾಗುತ್ತದೆ. ಇನ್ನು ಟ್ರಾಫಿಕ್ ನಿಯಂತ್ರಿಸುವ ಪೊಲೀಸರಿಗೂ ಸಾರ್ವಜನಿಕರು ಪ್ರಶ್ನಿಸಿ ಇರಿಸುಮುರಿಸು ಉಂಟುಮಾಡುತ್ತಾರೆ. ಅಲ್ಲದೇ ಸಾಮಾನ್ಯರಿಗೊಂದು, ಗಣ್ಯರಿಗೊಂದು ಕಾನೂನು ಇದೆಯಾ ಎಂದು ಒಮ್ಮೊಮ್ಮೆ ವಾದಕ್ಕಿಳಿಯುವುದೂ ಉಂಟು. ಹೀಗಾಗಿ ಅಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೂ ಈ ಸಮಸ್ಯೆ ಪರಿಹರಿಸುವುದು ಕಗ್ಗಂಟಾಗಿದೆ.

ಅಷ್ಟಕ್ಕೂ ಆಗಿದ್ದೇನು.?

ಕಳೆದ ಎರಡು ದಿನಗಳ ಹಿಂದೆ ಧಾರವಾಡದ ಶಿಕ್ಷಣ ಇಲಾಖೆ ಸಹನಿರ್ದೇಕರ ವಾಹನ ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ ತೆರಳುವ ಮಾರ್ಗ ಮಧ್ಯೆ ನಿಂತಿತ್ತು. ಇದರ ಪೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ಜನರಿಗೆ ಶಿಕ್ಷಣ ಕೊಡುವ ಇಲಾಖೆಯ ಅಧಿಕಾರಿಗಳೇ ಕಾರು ರಸ್ತೆ ಮಧ್ಯ ನಿಲ್ಲಿಸಿದರೆ ಜನರು ಹೇಗೆ ನಿಯಮ ಪಾಲಿಸುತ್ತಾರೆ.? ಎಂದು ಪ್ರಶ್ನೆ ಮಾಡಿದ್ದಾರೆ. ‘ಕೈಮುಗಿದು ಕೇಳುತ್ತೇನೆ ಮೊದಲು ನೀವು ನಿಯಮ ಪಾಲಿಸಿ ನಿಮ್ಮನ್ನು ನೋಡಿ ಜನರು ಅನುಸರಿಸುತ್ತಾರೆ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ಇದು ಎಲ್ಲೆಡೆ ವೈರಲ್ ಆಗಿದೆ.

ಸರ್ಕಾರಿ ವಾಹನದಲ್ಲಿ ಖಾಸಗಿ ಭೇಟಿಗೆ ಬಂದಿದ್ದರೇ.? ಅಥವಾ ಯಾವುದಾದರೂ ಸರ್ಕಾರಿ ಕೆಲಸದ ಮೇಲೆ ಬಂದಿದ್ದರೆ.? ಎಂಬುದು ಇನ್ನಷ್ಟೇ ತಿಳಿದುಬರಬೇಕು. ಆದರೆ ವಾಹನವನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಿದ್ದು ತಪ್ಪೇ.

ಒಟ್ಟಾರೆ ವಿಐಪಿಯೇ ಆಗಿರಲಿ ಸಾಮಾನ್ಯರೇ ಆಗಿರಲಿ ನಿಗದಿಪಡಿಸಿದ ಪಾರ್ಕಿಂಗ್ ಪ್ರದೇಶದಲ್ಲೇ ವಾಹನವನ್ನ ಪಾರ್ಕ್ ಮಾಡಬೇಕು. ಹೀಗೆ ದೇವಾಲಯದ ಮುಂದೆಯೇ ಅದೂ ದಾರಿ ಮಧ್ಯೆ ವಾಹನ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವುದು ಎಷ್ಟು ಸರಿ.? ಎನ್ನುವುದು ಸಾರ್ವಜನಿಕರ ಪ್ರಶ್ನೆ.!

ಇನ್ನಾದರೂ ಇಂತಹ ವಿಐಪಿ ಸಂಸ್ಕೃತಿ ಕೊನೆಗೊಳ್ಳಬೇಕು. ಅದರಲ್ಲೂ ಶಿಕ್ಷಣದ ಮೂಲಕ ಸಮಾಜ ತಿದ್ದುವ ಶಿಕ್ಷಣ ಇಲಾಖೆ ಅಧಿಕಾರಿಗಳೇ ಈ ರೀತಿ ವರ್ತಿಸಿದರೆ ಹೇಗೆ.? ಸಾಮಾಜಿಕ ಜಾಲತಾಣಗಳಲ್ಲಿ ಜನ ತರಾಟೆಗೆ ತೆಗೆದುಕೊಂಡ ನಂತರವಾದ್ರೂ ಸರ್ಕಾರಿ ವಾಹನಗಳು ನಿಯಮ ಅನುಸರಿಸುತ್ತದೆಯೋ ಎಂಬುದನ್ನ ಕಾದು ನೋಡಬೇಕು.