ರೈತರ ಕೃಷಿ ಚಟುವಟಿಕೆಗೆ ಹೈನುಗಾರಿಕೆ ಮಹತ್ವದ ಆಧಾರ : ಡಾ.ಕೆ.ಎಂ.ನದಾಫ್

ಹಳಿಯಾಳ : ರೈತರ ಕೃಷಿ ಚಟುವಟಿಕೆಗೆ ಹೈನುಗಾರಿಕೆ ಮಹತ್ವದ ಆಧಾರವಾಗಿದೆ. ಕೃಷಿಗೆ ಮತ್ತು ಹೈನುಗಾರಿಕೆಗೆ ಒಂದಕ್ಕೊಂದು ಸಂಬಂಧವಿದೆ ಸಮೃದ್ಧ ಹೈನುಗಾರಿಕೆಯಿಂದ ಸಮೃದ್ಧ ಕೃಷಿ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ರೈತರು ಕೃಷಿ ಚಟುವಟಿಕೆಯ ಜೊತೆಗೆ ಹೈನುಗಾರಿಕೆಯನ್ನು ಆದಾಯೋತ್ಪನ್ನ ಚಟುವಟಿಕೆಯನ್ನಾಗಿ ರೂಪಿಸಿಕೊಳ್ಳಬೇಕೆಂದು ಹಳಿಯಾಳ ತಾಲೂಕು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಕೆ.ಎಂ.ನದಾಫ್ ಅವರು ಕರೆ ನೀಡಿದರು.

ಅವರು ತಾಲೂಕಿನ ತೇರಗಾವನಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆ ಮತ್ತು ಪಶು ಸಂಗೋಪನಾ ಇಲಾಖೆಯ ಆಶ್ರಯದಡಿ ಹಮ್ಮಿಕೊಂಡಿದ್ದ ಎರಡು ದಿನಗಳ ಹೈನುಗಾರಿಕಾ ತರಬೇತಿ ಕಾರ್ಯಕ್ರಮದ ಸಮರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ತರಬೇತಿ ಕಾರ್ಯಕ್ರಮಕ್ಕೆ ಗೋಪೂಜೆಯನ್ನು ನೆರವೇರಿಸುವುದರ ಮೂಲಕ ಚಾಲನೆಯನ್ನು ನೀಡಲಾಗಿತ್ತು. ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಹಿರಿಯ ಸಲಹೆಗಾರರಾದ ಅನಂತಯ್ಯ ಆಚಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಸಾಕಷ್ಟು ಬಾರಿ ರೈತರು ಸಂಕಷ್ಟವನ್ನು ಎದುರಿಸುವ ಸಂದರ್ಭದಲ್ಲಿ ರೈತರನ್ನು ಕೈ ಹಿಡಿಯುವುದೇ ಹೈನುಗಾರಿಕೆ. ಹೈನುಗಾರಿಕೆಯನ್ನು ಲಾಭದಾಯಕ ಉದ್ಯಮವನ್ನಾಗಿಸಲು ಮುಂದಾಗಬೇಕೆಂದು ಕರೆ ನೀಡಿದರು.

ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ನಿರ್ದೇಶಕರಾದ ಪ್ರಶಾಂತ್ ಬಡ್ಡಿಯವರು ಹೈನುಗಾರಿಕಾ ತರಬೇತಿಯ ಅವಶ್ಯಕತೆಯನ್ನು ವಿವರಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಪಶು ವೈದ್ಯರಾದ ಡಾ.ಸಿ.ಎಸ್. ಹಾವೇರಿ ಅವರು ಭಾಗವಹಿಸಿ ಹೈನುಗಾರಿಕೆಯ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ನಿಕಟ ಪೂರ್ವ ಅಧ್ಯಕ್ಷ ಸಾತಪ್ಪ ಕಕ್ಕೇರಿ, ನಿಕಟಪೂರ್ವ ಉಪಾಧ್ಯಕ್ಷೆ ಜಬಿನಾ ಪುಂಗಿ, ಗ್ರಾಮ ಪಂಚಾಯತ್ ಸದಸ್ಯ ಬಸವರಾಜ ಲಕ್ಕನಗೌಡ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋರೆ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಯೋಜನಾಧಿಕಾರಿ ಸಂತೋಷ್ ಪರೀಟ್ ಮತ್ತು ಕ್ಷೇತ್ರ ಮೇಲ್ವಿಚಾರಕರಾದ ವಿಷ್ಣು ಮಡಿವಾಳ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.