ಯಲ್ಲಾಪುರ: ತಾಲೂಕಿನಾದ್ಯಂತ ಜೋರಾದ ಮಳೆ ಮುಂದುವರಿದಿದ್ದು, ಶುಕ್ರವಾರ ರಾತ್ರಿ ಮಳೆ ಅಬ್ಬರಿಸಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿದು, ಕೃಷಿ ಜಮೀನಿಗೆ ನುಗ್ಗಿ ಅಪಾರ ಹಾನಿ ಸಂಭವಿಸಿದೆ.
ಗಂಗಾವಳಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಗುಳ್ಳಾಪುರದಲ್ಲಿ ತಾತ್ಕಾಲಿಕ ಸೇತುವೆ ಸಂಪೂರ್ಣ ಮುಳುಗಿ ಹೋಗಿದೆ. ಕುಸಿದು ಹೋದ ಹಳೆಯ ಸೇತುವೆಯ ಮಟ್ಟದಲ್ಲಿ ನೀರು ಹರಿಯುತ್ತಿದ್ದು, ಎರಡು ವರ್ಷಗಳ ಹಿಂದಿನ ಪ್ರವಾಹದ ಸ್ಥಿತಿಯನ್ನು ನೆನಪಿಸುವಂತಿದೆ. ಫಣಸಗುಳಿಯ ತಾತ್ಕಾಲಿಕ ಸೇತುವೆಯೂ ಮುಳುಗಡೆಯಾಗಿದ್ದು, ಹೆಗ್ಗಾರ, ಶೇವ್ಕಾರ, ಕೈಗಡಿ, ಹಳವಳ್ಳಿ ಮುಂತಾದ ಭಾಗದ ಜನರಿಗೆ ರಾಮನಗುಳಿ ಬಳಿ ಇರುವ ನಿರ್ಮಾಣ ಹಂತದ ಸೇತುವೆಯೇ ಗತಿಯಾಗಿದೆ.
ವಿವಿಧೆಡೆ ಹಾನಿ:
ಮಳೆ-ಗಾಳಿಯಿಂದ ತಾಲೂಕಿನ ಉಪಳೇಶ್ವರದ ಹುತ್ಕಂಡ ಅಂಗನವಾಡಿ ಮುಂಭಾಗದ ಗೋಡೆ ಕುಸಿದಿದೆ. ಮಕ್ಕಳನ್ನು ಬೇರೆಡೆ ಕುಳ್ಳಿರಿಸಲಾಗಿದ್ದು, ಯಾರಿಗೂ ಅಪಾಯ ಸಂಭವಿಸಿಲ್ಲ. ಉಪಳೇಶ್ವರ ಮುಖ್ಯರಸ್ತೆಯಿಂದ ಮಾಣಿಗದ್ದೆ-ಸಾಸ್ಮೆಗದ್ದೆಗೆ ಹೋಗುವ ರಸ್ತೆಯಲ್ಲಿ ಮರ ಬಿದ್ದಿದೆ. ವಿದ್ಯುತ್ ಲೈನ್ ಮೇಲೆ ಮರ ಬಿದ್ದಿರುವುದರಿಂದ ಎರಡು ಕಂಬಗಳು ಮುರಿದಿವೆ.
ಉಮ್ಮಚಗಿ ಗ್ರಾ.ಪಂ ವ್ಯಾಪ್ತಿಯ ನಂದಿಬಾವಿಯಲ್ಲಿ ಗೀತಾ ಪುಟ್ಟ ಸಿದ್ದಿ ಅವರ ಮನೆ ಗೋಡೆ ಕುಸಿದು ಹಾನಿಯಾಗಿದೆ. ಗೋಡೆ ಕುಸಿಯುವ ಮುನ್ಸೂಚನೆ ಇದ್ದ ಕಾರಣ ಮನೆಯವರು ಬೇರೆ ಕಟ್ಟಡದಲ್ಲಿ ವಾಸವಾಗಿದ್ದು, ಯಾವುದೇ ಅಪಾಯವಾಗಿಲ್ಲ. ಗ್ರಾ.ಪಂ ಸದಸ್ಯರಾದ ಖೈತಾನ ಡಿಸೋಜಾ, ಕುಪ್ಪಯ್ಯ ಪೂಜಾರಿ, ಅಶೋಕ ಪೂಜಾರಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.