ಹಳಿಯಾಳ ಪಟ್ಟಣದಲ್ಲಿ ವಿವಿಧ ಬೇಕರಿಗಳ‌ ಮೇಲೆ ದಾಳಿ : ಅವಧಿ‌ ಮುಗಿದ ತಿಂಡಿಗಳ‌ ಮಾರಾಟ – ದಂಡ ಆಕರಣೆ

ಹಳಿಯಾಳ : ಪುರಸಭೆಯ ಮುಖ್ಯಾಧಿಕಾರಿ ಅಶೋಕ್ ಸಾಳೆನ್ನವರ ಅವರ ನೇತೃತ್ವದಲ್ಲಿ ಪಟ್ಟಣದ ವಿವಿಧ ಬೇಕರಿಗಳಿಗೆ ದಾಳಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಪಟ್ಟಣದ ಎರಡು ಬೇಕರಿಗಳಲ್ಲಿ ಅವಧಿ ಮುಗಿದಿದ್ದ ತಿಂಡಿಗಳನ್ನು ಮಾರಾಟಕ್ಕಿಟ್ಟಿರುವುದು ಕಂಡು ಬಂದಿದ್ದು, ಆ‌ ಎರಡು ಬೇಕರಿಗಳಿಗೆ ಒಟ್ಟು ರೂ.4,000/- ದಂಡ ಆಕರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅವಧಿ ಮುಗಿದ ತಿಂಡಿ, ತಿನಿಸುಗಳನ್ನು ಮಾರಾಟ ಮಾಡಿದ್ದಲ್ಲಿ ಸೂಕ್ತ ರೀತಿಯ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆಯನ್ನು ನೀಡಲಾಗಿದೆ.

ಇದೇ ಸಂದರ್ಭದಲ್ಲಿ ವಿವಿಧ ಅಂಗಡಿಗಳಿಗೆ ದಾಳಿ ಮಾಡಲಾಗಿ, ಮೂರು ಅಂಗಡಿಗಳಲ್ಲಿದ್ದ ನಿಷೇಧಿತ ಪ್ಲಾಸ್ಟಿಕ್ ಗಳನ್ನು ವಶಪಡಿಸಿಕೊಂಡು ಒಟ್ಟು ರೂ:5,500/- ದಂಡವನ್ನು ಆಕರಿಸಿ, ನಿಷೇಧಿತ ಪ್ಲಾಸ್ಟಿಕ್ ಗಳನ್ನು ಬಳಕೆ ಮಾಡದಂತೆ ಮತ್ತು ಮಾರಾಟ ಮಾಡದಂತೆ ಎಚ್ಚರಿಕೆಯನ್ನು ನೀಡಲಾಯ್ತು.

ಈ ಸಂದರ್ಭದಲ್ಲಿ ಪುರಸಭೆಯ ಪರಿಸರ ಅಭಿಯಂತರರಾದ ದರ್ಶಿತಾ.ಬಿ.ಎಸ್ ಹಾಗೂ ಪುರಸಭೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪುರಸಭೆಯ ಅಧಿಕಾರಿಯವರ ನೇತೃತ್ವದ ದಾಳಿ ಇದೀಗ ಪಟ್ಟಣದಲ್ಲಿ ಸಂಚಲನ‌ ಮೂಡಿಸಿದ್ದು, ಪಟ್ಟಣದ ನಾಗರಿಕ ವಲಯದಲ್ಲಿ ಮೆಚ್ಚುಗೆ‌ ವ್ಯಕ್ತವಾಗಿದೆ.