ಕಾರವಾರ, ಸೆ.22: ಮೃತಪಟ್ಟ ಬಳಿಕ ಗೌರವಯುತವಾಗಿ ಬೀಳ್ಕೊಡಬೇಕೆಂಬುವುದು ಪ್ರತಿಯೊಬ್ಬರ ಆಸೆಯಾಗಿರುತ್ತೆ. ಆದರೆ ಕೆಲ ಸಮಸ್ಯೆಯಿಂದ ಮೃತದೇಹವನ್ನು ರವಾನಿಸಲು ಕುಟುಂಬಸ್ಥರು ಪರದಾಡುವಂತಹ ಪರಿಸ್ಥಿತಿ ಹಲವೆಡೆ ಕಂಡು ಬರುತ್ತಿದೆ. ಇತ್ತೀಚೆಗೆ ತುಮಕೂರಿನಲ್ಲಿ ಮನಕಲಕುವ ಘಟನೆಯೊಂದು ನಡೆದಿತ್ತು. ಸೂಕ್ತ ಸಮಯದಲ್ಲಿ ಆಂಬುಲೆನ್ಸ್ ದೊರೆಯದ ಹಿನ್ನೆಲೆ ಮಕ್ಕಳು ತಮ್ಮ ತಂದೆಯ ಮೃತದೇಹವನ್ನು ಬೈಕ್ನಲ್ಲೇ ಸಾಗಿಸಿರುವ ಘಟನೆ ತಾಲೂಕಿನ ವೈ ಎನ್ ಹೊಸಕೋಟೆಯಲ್ಲಿ ನಡೆದಿತ್ತು. ಇದೀಗ ಇದೇ ಮಾದರಿಯ ಮತ್ತೊಂದು ಘಟನೆ ನಡೆದಿದೆ. ಕಾರವಾರ ನಗರಸಭೆ ವ್ಯಾಪ್ತಿಯ ಗುಡ್ಡಹಳ್ಳಿಯಲ್ಲಿ ರಸ್ತೆ ಸರಿ ಇಲ್ಲ ಎಂದು ಕಟ್ಟಿಗೆಗೆ ಮೃತದೇಹ ಕಟ್ಟಿ ರವಾನಿಸಲಾಗಿದೆ.
ಅನಾರೋಗ್ಯದ ಕಾರಣ ನಿನ್ನೆ ರಾತ್ರಿ ಕಾರವಾರ ಆಸ್ಪತ್ರೆಗೆ ರಾಮಾ ಮುನ್ನಾಗೌಡ ಅವರನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ತಡರಾತ್ರಿ 12 ಗಂಟೆಗೆ ಏಕಾಏಕಿ ಹೃದಯಾಘಾತ ಸಂಭವಿಸಿ ರಾಮಾ ಮುನ್ನಾಗೌಡ ಅವರು ಮೃತಪಟ್ಟಿದ್ದರು. ಸದ್ಯ ಆಸ್ಪತ್ರೆಯಿಂದ ಮನೆಗೆ ಮೃತದೇಹವನ್ನು ರವಾನಿಸಲು ರಸ್ತೆ ಸರಿ ಇಲ್ಲ ಎಂಬ ಕಾರಣಕ್ಕೆ ಜನರೆಲ್ಲ ಸೇರಿ ಕಟ್ಟಿಗೆಗೆ ಮೃತದೇಹ ಕಟ್ಟಿ ರವಾನಿಸಿದ್ದಾರೆ.
ಗುಡ್ಡದ ಮೇಲಿರುವ ಮನೆಗೆ ಶವ ಸಾಗಿಸಲು ಸರಿಯಾದ ರಸ್ತೆ ಸಂಪರ್ಕ ಇಲ್ಲದ ಹಿನ್ನೆಲೆ ಕಟ್ಟಿಗೆಗೆ ಹಗ್ಗದಿಂದ ಕಟ್ಟಿ ಶವ ಸಾಗಾಟ ಮಾಡಲಾಗಿದೆ. ಆದರೆ ಈ ರೀತಿ ಶವ ಸಾಗಿಸಿದ ದೃಶ್ಯ ಮನ ಕಲಕುವಂತಿದೆ. ಆದಷ್ಟು ಬೇಗ ಸರ್ಕಾರ ಈ ಬಗ್ಗೆ ಗಮನ ಹರಿಸಿ ಸೂಕ್ತ ವ್ಯವಸ್ಥೆ ಮಾಡಬೇಕಿದೆ. ಇಂತಹ ಪರಿಸ್ಥಿತಿಗಳು ರಾಜ್ಯದ ಅನೇಕ ಭಾಗಗಳಲ್ಲಿ ಈಗಲೂ ಕಂಡು ಬರುತ್ತದೆ. ರಸ್ತೆ ಸಂಪರ್ಕ, ವಿದ್ಯುತ್ ಇಲ್ಲದೆ ಮೂಲಸೌಕರ್ಯಗಳಿಲ್ಲದೆ ಅದೆಷ್ಟೋ ಹಳ್ಳಿಗಳು ಜೀವನವನ್ನು ಕಟ್ಟಿಕೊಂಡಿವೆ.