ಕಾಳಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕುಸಿತ – ನೀರಿಗೆ ಬಿದ್ದ ಲಾರಿ, ಚಾಲಕನ ರಕ್ಷಣೆ

ಕಾರವಾರ: ಕಾಳಿ ನದಿ ಸೇತುವೆಗೆ ಅಡ್ಡಲಾಗಿ 40 ವರ್ಷದ ಹಿಂದೆ ಕಟ್ಟಿದ್ದ ಸೇತುವೆ ಕುಸಿದು ಬಿದ್ದ ಪರಿಣಾಮ ತಮಿಳುನಾಡು ಮೂಲದ ಲಾರಿಯೊಂದು ನದಿಗೆ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಸೇತುವೆ ಕುಸಿದಿದ್ದು, ಘಟನೆಯಲ್ಲಿ ಲಾರಿ ಚಾಲಕ ಬಾಲಮುರುಗನ್ ಅವರನ್ನು ರಕ್ಷಣೆ ಮಾಡಲಾಗಿದೆ. ಗೋವಾದಿಂದ ಹುಬ್ಬಳ್ಳಿಗೆ ತೆರಳುತಿದ್ದ ಖಾಲಿ ಲಾರಿ ಕಾಳಿನದಿಯ ಸೇತುವೆಮೇಲೆ ವೇಗವಾಗಿ ಹೋಗುತ್ತಿದ್ದ ವೇಳೆ ಸೇತುವೆ ಕುಸಿದಿದೆ. ಈ ವೇಳೆ ಚಾಲಕ ಲಾರಿಯ ಕ್ಯಾಬಿನ್ ಮೇಲೆ ನಿಂತು ಕೂಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಆಗಮಿಸಿದ ಕರಾವಳಿ ಕಾವಲುಪಡೆ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಅವರ ರಕ್ಷಣೆ ಮಾಡಲಾಗಿದೆ.

ಕಾಳಿ ನದಿಯ ಸೇತುವೆ ಮೂರು ಕಡೆ ಕುಸಿದಿದೆ. ಕಾರವಾರದಿಂದ ಗೋವಾ ಕಡೆಗೆ ತೆರಳುವ ಮೊದಲ ಭಾಗ, ನಂತರ ಮಧ್ಯ ಭಾಗ, ಅದರ ನಂತರ ಗೋವಾದಿಂದ ಕಾರವಾರದ ಕಡೆ ಬರುವ ಪ್ರಾರಂಭದಲ್ಲಿ ಸೇತುವೆಯ ಮೇಲ್ಛಾವಣಿ ಹಾಸು ಕುಸಿದು ಘಟನೆ ನಡೆದಿದೆ.

ಘಟನೆ ನಡೆದ ನಂತರ ಗೋವಾ-ಕಾರವಾರ ಮಾರ್ಗದ ಎರಡು ಭಾಗದ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಜಿಲ್ಲಾಧಿಕಾರಿ, ಕಾರವಾರದ ಶಾಸಕ ಸತೀಶ್ ಸೈಲ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ನಂತರ ಆಸ್ಪತ್ರೆಗೆ ತೆರಳಿ ಗಾಯಾಳುವನ್ನು ಭೇಟಿಯಾಗಿ ಮಾಹಿತಿ ಪಡೆದರು. 

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅಗ್ನಿಶಾಮಕ ದಳದ ಸಿಬ್ಬಂದಿ, ಕರಾವಳಿ ಕಾವಲು ಪಡೆ ಮೊಕ್ಕಾಂ ಹೂಡಿದೆ.