ಜೈನಮುನಿಗಳ ಹತ್ಯೆ ಪ್ರಕರಣ – ಸ್ವಾಮೀಜಿ ಪರ್ಸನಲ್ ಡೈರಿ ಪತ್ತೆ

ಚಿಕ್ಕೋಡಿ: ಹಿರೇಕೋಡಿ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪರ್ಸನಲ್ ಡೈರಿಯನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾಗಿ ಮೂಲಗಳು ಖಚಿತ ಪಡಿಸಿವೆ.

ಜೈನಮುನಿಗಳ ಡೈರಿಯನ್ನು ಸುಟ್ಟು ಹಾಕಿದ್ದಾಗಿ ಬಂಧಿತ ಆರೋಪಿಗಳು ಕಥೆ ಕಟ್ಟಿದ್ದರು. ಆದರೆ ಇದೀಗ ಪೊಲೀಸರ ಕೈಗೆ ಜೈನಮುನಿಗಳ ಡೈರಿ ಲಭ್ಯವಾಗಿದೆ. ಡೈರಿಯಲ್ಲಿ ಉಲ್ಲೇಖವಿರುವವರನ್ನು ಠಾಣೆಗೆ ಕರೆಸಿ ತನಿಖೆ ಮಾಡಲಾಗುತ್ತಿದೆ. ಇದರಿಂದಾಗಿ ಸ್ವಾಮೀಜಿ ಬಳಿ ಹಣ ಪಡೆದಿದ್ದವರಲ್ಲಿ ಆತಂಕ ಶುರುವಾಗಿದೆ.

ಪೊಲೀಸರ ದಿಕ್ಕು ತಪ್ಪಿಸುತ್ತಿದ್ದ ಎ1 ಆರೋಪಿ ನಾರಾಯಣ ಮಾಳಿ, ಎ2 ಆರೋಪಿ ಹಸನ್ ಸಾಬ್ ದಲಾಯತ್, ತಮ್ಮ ರಕ್ತಸಿಕ್ತ ಬಟ್ಟೆ ಜೊತೆ ಜೈನಮುನಿಗಳ ಪರ್ಸನಲ್ ಡೈರಿಯನ್ನು ಸುಟ್ಟು ಹಾಕಿದ್ದಾಗಿ ಹೇಳಿದ್ದರು. ಅಲ್ಲದೇ ಪೊಲೀಸರಿಗೆ ಬೂದಿಯನ್ನು ಸಹ ತೋರಿಸಿದ್ದರು. ಬಳಿಕ ಪೊಲೀಸರು ಎಫ್‍ಎಸ್‍ಎಲ್‍ಗೆ ಬೂದಿಯನ್ನು ರವಾನಿಸಿದ್ದರು. ಈಗ ಡೈರಿಯ ಬೂದಿ ಅಲ್ಲ ಎಂಬುದು ತನಿಖೆ ವೇಳೆ ಪತ್ತೆಯಾಗಿದೆ. ಡೈರಿ ಪತ್ತೆಯಾಗುತ್ತಿದ್ದಂತೆ ತನಿಖೆ ಚುರುಕುಗೊಂಡಿದೆ.