ಅಂಕೋಲಾ : ತಾಲೂಕಿನ ಹಟ್ಟಿಕೇರಿ ಗ್ರಾ.ಪಂ.ವ್ಯಾಪ್ತಿಯಲ್ಲಿನ ಕೆಳಗಿನಬೇಣ ಶಾಲೆಯಲ್ಲಿ ಹಟ್ಟಿಕೇರಿ ಗ್ರಾಮ ಪಂಚಾಯತದ ಸದಸ್ಯರಾದ ವಸಂತಿ ಜಯವಂತ ಗೌಡ, ಮಧುಕರ ನಾಗೇಶ ಗೌಡ ಹಾಗೂ ರಾಜು ವಾಮನ ಗೌಡ ಇವರನ್ನು ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕೆಳಗಿನಬೇಣ ಶಾಲೆಗೆ ಕುಡಿಯುವ ನೀರಿನ ತೀರ ಅವಶ್ಯಕತೆಯಿತ್ತು ಈ ಸಂಬಂಧ ಶಿಕ್ಷಕರು ಸದಸ್ಯರಲ್ಲಿ ಮನವಿ ಮಾಡಿಕೊಂಡಿದ್ದರು. ಮನವಿಗೆ ತಕ್ಷಣ ಸ್ಪಂದಿಸಿದ ಗ್ರಾ.ಪಂ. ಸದಸ್ಯರು ಹೆಚ್ಚಿನ ಮುತುವರ್ಜಿ ವಹಿಸಿ ತಮ್ಮ ತಮ್ಮ ಅನುದಾನವನ್ನು ಬಳಸಿ ಶಾಲೆಯ ಎದುರು ಇದ್ದ ಬೋರವೆಲ್ ಗೆ ವಿದ್ಯುತ್ ಮೋಟರನ್ನು ಅಳವಡಿಸಿದ್ದಲ್ಲದೆ ಸುಮಾರು 3 ಸಾವಿರ ಲೀಟರ ಸಾಮರ್ಥ್ಯದ ನೀರಿನ ಸಿಮೆಂಟ್ ಟ್ಯಾಂಕ್ ನಿರ್ಮಿಸಿ ಕೊಟ್ಟಿದ್ದರು. ಈ ಕಾರ್ಯದಿಂದ ಶಾಲೆಗೆ ತುಂಬ ಪ್ರಯೋಜನವಾಗಿದ್ದು ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಿದಂತಾಗಿದ್ದರಿಂದ ಶಾಲೆಯ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ರಾಜು ಎಚ್ ನಾಯಕ ಮಾತನಾಡಿ ಕೆಳಗಿನಬೇಣ ಶಾಲೆಯಲ್ಲಿನ ಮಕ್ಕಳಿಗೆ ಉಂಟಾಗಿದ್ದ ಕುಡಿಯುವ ನೀರಿನ ಸಮಸ್ಯೆಯನ್ನು ಅರಿತು ಶಾಲೆಯ ಮನವಿಗೆ ಸ್ಪಂಧಿಸಿ ಕೆಲಸ ಮಾಡಿಕೊಟ್ಟು ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ಈ ಮೂವರು ಸದಸ್ಯರ ಉಪಯುಕ್ತವಾದ ಕಾರ್ಯದ ಕುರಿತು ಮೆಚ್ಚುಗೆಯ ಮಾತನ್ನಾಡಿ ಇವರಿಂದ ಶಾಲೆಗೆ ಮತ್ತು ಊರಿಗೆ ಇನ್ನೂ ಹೆಚ್ಚಿನ ಸೇವೆ ಲಭಿಸಲಿ ಎಂದರು. ಸನ್ಮಾನಿತರ ಪರವಾಗಿ ವಸಂತಿ ಗೌಡ ಮಾತನಾಡಿ ಊರಿನ ಶಾಲೆಗಾಗಿ ತಾವು ಯಾವತ್ತೂ ಸಹಕಾರವನ್ನು ನೀಡುತ್ತೇವೆ ಮುಂದಿನ ದಿನಗಳಲ್ಲಿ ತಾವೆಲ್ಲ ಸೇರಿ ಶಾಲೆಗೆ ನಾಮಫಲಕ ಇರುವ ಹೆಬ್ಬಾಗಿಲನ್ನು ನಿರ್ಮಿಸಿಕೊಡುವದಾಗಿ ಭರವಸೆಯನ್ನು ನೀಡಿದರು. ಶಾಲೆಯ ಅತಿಥಿ ಶಿಕ್ಷಕಿ ತುಳಸೀ ಗೌಡ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಹ ಶಿಕ್ಷಕ ಈರಾ ಮಂಕಾಳು ಗೌಡ ವಂದಿಸಿದರು.