ಸಹಾಯಕ ಆಯುಕ್ತ ಡಾ. ನಯನಾ ಅಧ್ಯಕ್ಷತೆಯಲ್ಲಿಸಾರ್ವಜನಿಕರ ಸಭೆ

ಭಟ್ಕಳ: ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಹಾಯಕ ಆಯುಕ್ತ ಡಾ. ನಯನಾ ಅಧ್ಯಕ್ಷತೆಯಲ್ಲಿ ಜಿಲ್ಲಾ ತಂಡದ ಅಧಿಕಾರಿಗಳು, ಪುರಸಭೆ ಸದಸ್ಯರು ಮತ್ತು ಸಾರ್ವಜನಿಕರ ಸಭೆ ನಡೆದಿದ್ದು, ಸಭೆಯಲ್ಲಿ ಮಳೆಗಾಲದಲ್ಲಿ ರಸ್ತೆ ಮೇಲೆ ನೀರು ನಿಲ್ಲದಂತೆ ಶಾಶ್ವತ ಪರಿಹಾರ ಕಲ್ಪಿಸಲು ಚರ್ಚೆ ನಡೆಸಲಾಯಿತು.

ಪಟ್ಟಣದ ರಂಗಿನಕಟ್ಟೆ, ವೃತ್ತ ಹಾಗೂ ಮಣ್ಣುಳಿ ಪ್ರದೇಶದಲ್ಲಿ ಮಳೆ ನೀರು ರಸ್ತೆಯ ಮೇಲೆ ನಿಂತು ಹೊಳೆಯಾಗಿ ಸಂಚಾರಕ್ಕೆ ತೊಂದರೆ ಆಗುತ್ತಿರುವ ಬಗ್ಗೆ ಪುರಸಭೆ ಸದಸ್ಯರು ಹಾಗೂ ಸಾರ್ವಜನಿಕರಿಂದ ಕಾರಣ ತಿಳಿದುಕೊ೦ಡ ಸಹಾಯಕ ಆಯುಕ್ತ ಡಾ. ನಯನಾ ಅವರು ನೀರು ಸಮರ್ಪಕವಾಗಿ ಹರಿದುಹೋಗಲು ಆಳದ ಚರಂಡಿ ನಿರ್ಮಾಣ, ಹೊಳೆಗೆ ಸಂಪರ್ಕಿಸುವ ಚರಂಡಿಗಳ ಮಾಹಿತಿ ಪಡೆದುಕೊ೦ಡರು.

ಪಟ್ಟಣ ಭಾಗದಲ್ಲಿ ಚರಂಡಿಗಳನ್ನು ಸಮರ್ಪಕವಾಗಿ ಹೂಳೆತ್ತದ ಬಗ್ಗೆ, ಪುರಸಭೆ ಸದಸ್ಯರಿಂದ ದೂರು  ಬಂದ ಹಿನ್ನೆಲೆಯಲ್ಲಿ ಚರಂಡಿಗಳ ಹೂಳೆತ್ತಲು ಕ್ರಮವಹಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ಜಿಲ್ಲಾ ಯೋಜನಾಧಿಕಾರಿ ಶೈಲಾ ವರ್ಗೀಸ್ ಸೂಚಿಸಿದರು.
ಈ ಹಿ೦ದೆ ಇದ್ದಂತಹ ಮಾರ್ಗದಲ್ಲಿ ಚರಂಡಿಗಳನ್ನು ಐಆರ್‌ಬಿ ಹಾಗೂ ಪುರಸಭೆಯಿಂದ ಮುಚ್ಚಲಾಗಿದೆ. ಅದನ್ನು ಪುನಃ ತೆರೆದು ಬಿಡಿಸಿಕೊಟ್ಟರೆ ಸಂಶುದ್ದೀನ ವೃತ್ತ ಹಾಗೂ ರಂಗಿನಕಟ್ಟೆಯಲ್ಲಿ ನೀರು ನಿಲ್ಲುವುದಿಲ್ಲ. ಎಂಬ ಸಲಹೆಯನ್ನು ಪುರಸಭೆಯ ಬಹುತೇಕ ಸದಸ್ಯರು ಜಿಲ್ಲಾ ತಂಡಕ್ಕೆ ನೀಡಿದರು. ಇದನ್ನು ಒಪ್ಪಿದ ಜಿಲ್ಲಾ ತಂಡ ಆಜಾದ ನಗರ, ಕೋರ್ಟ್ ಹಾಗೂ ಗುಡಲಕ್ ರಸ್ತೆಗಳಲ್ಲಿ ಚರಂಡಿ ವ್ಯವಸ್ಥೆ ಮಾಡಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿಕೊಡುವ ಬಗ್ಗೆ ವರದಿ ನೀಡುವುದಾಗಿ ತಿಳಿಸಿದರು.
ಮಣ್ಣುಳಿ ಹಾಗೂ ಮೂಡಭಟ್ಕಳ ಭಾಗಗಳಲ್ಲಿ
1.25 ಮೀಟರ್ ಚರಂಡಿ ನಿರ್ಮಾಣಕ್ಕೆ ಒಪ್ಪದ ಐಆರ್‌ಬಿಯವರಿಗೆ ಜಿಲ್ಲಾ ಯೋಜನಾಧಿಕಾರಿ ಮತ್ತು ಸಹಾಯಕ ಆಯುಕ್ತ ಡಾ. ನಯನಾ ಅಲ್ಲಿ ಮಳೆ ನೀರು ಸರಾಗವಾಗಿ ಹೋಗಲು ಚರಂಡಿ ನಿರ್ಮಿಸುವಂತೆ ತಾಕೀತು ಮಾಡಿದರು. ಹೆದ್ದಾರಿ ಯೋಜನೆಯ ನೀಲನಕ್ಷೆಯನ್ನು ಸಭೆಗೆ ತರದೇ ಖಾಲಿ ಕೈಯಲ್ಲಿ ಬ೦ದಿದ್ದ ಐಆರ್‌ಬಿ ವ್ಯವಸ್ಥಾಪಕ ಶ್ರೀನಿವಾಸ ಹಾಗೂ ರಾಜಕಾಲುವ ಇರುವ ನೀಲನಕ್ಷೆಯನ್ನು ತರದ ಸರ್ವೇ ಇಲಾಖೆ ಸಹಾಯಕ ನಿರ್ದೇಶಕ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಸಹಾಯಕ ಆಯುಕ್ತ ಡಾ.ನಯನಾ ನೀಲನಕ್ಷೆಯೊಂದಿಗೆ ಕಚೇರಿಯಲ್ಲಿ ಹಾಜರಿರುವಂತೆ ತಾಕೀತು ಮಾಡಿದರು.
ಸಭೆಯಲ್ಲಿ ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ರಾಜೇಶನಾಯಕ, ನಾಗರಿಕ ಹಿತರಕ್ಷ ಣಾ ಸಮಿತಿಯ ಅಧ್ಯಕ್ಷ ಸತೀಶಕುಮಾರ ನಾಯ್ಕ, ತಂಜೀಂ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ, ಪುರಸಭೆ ಸದಸ್ಯರಾದ ಅಲ್ತಾಫ ಖರೂರಿ, ಕೈಸರ್ ಮೊಹತಿಶ್ಯಾಂ, ಅಜೀಮ್, ಇಂಶಾದ್, ಮೊಹತಿಶ್ಯಾಂ, ಪುರಸಭೆ ಮುಖ್ಯಾಧಿಕಾರಿ ಎಂ.ಕೆ. ನಗರಾಭಿವೃದ್ಧಿ ಕೋಶದ ಸುರೇಶ, ಜಿಲ್ಲಾ ಅಭಿಯಂತರರು, ಒಳಚರಂಡಿ ಹಾಗೂ ನೀರು ಸರಬರಾಜು ಮಂಡಳಿ ಅಭಿಯಂತರ ಶಿವರಾಮ ನಾಯ್ಕ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರಿದ್ದರು