ಸಿದ್ದಾಪುರ; ಪಟ್ಟಣದ ಹೊಸೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಳೀಯ ಶ್ರೀ ಬೊಮ್ಮೇಶ್ವರ ಕಲಾಬಳಗದವರು ಆಯೋಜಿಸಿದ್ದ ಮಕ್ಕಳಿಗಾಗಿ ಯಕ್ಷಗಾನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಯಕ್ಷಗಾನ ಕಲಾವಿದ ಶಂಕರ ಭಟ್ಟ ಮಾತನಾಡಿ,ಪಂಡಿತರಿಗೂ,ಪಾಮರರಿಗೂ ಏಕಕಾಲದಲ್ಲಿ ಸಂತುಷ್ಠಿ ನೀಡುವ ಕಲೆ ಯಕ್ಷಗಾನವಾಗಿದ್ದು ಇದು ಸಮಷ್ಠಿ ಕಲೆಯಾಗಿದೆ. ಗಾಯನ,ವಾದನ,ನರ್ತನ,ಅರ್ಥಗಾರಿಕೆ ನಾಟಕೀಯತೆ ಇವೆಲ್ಲಗಳ ಸಮಪಾಕವೇ ಯಕ್ಷಗಾನವಾಗಿದೆ ಈ ಕಲೆ ದಿವ್ಯಪುರುಷರ ಆದರ್ಶಗಳನ್ನು ಅಭಿವ್ಯಕ್ತಿಪಡಿಸುವ ಅತ್ಯತ್ತಮ ಅಭಿವ್ಯಕ್ತ ಮಾಧ್ಯಮವಾಗಿದೆ. ಇಂತಹ ಕಜಲೆಯ ಬೆಳವಣಿಗೆಯಾಗಬೇಕು ನಮ್ಮ ಮುಂದಿನ ಪೀಳಿಗೆ ಈ ಕಲೆಯನ್ನು ಜೀವಂತವಾಗಿಡುವ ಕೆಲಸ ಮಾಡಬೇಕು ಈ ನಿಟ್ಟಿನಲ್ಲಿ ಬೊಮ್ಮೇಶ್ವರ ಕಲಾಬಳಗ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುವ ಮೂಲಕ ಯಕ್ಷಗಾನ ಕಲೆಯನ್ನು ಬೆಳೆಸುವ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಪ್ರಾಂಶುಪಾಲ ಎಂ. ಕೆ. ನಾಯ್ಕ, ವಿದ್ಯಾರ್ಥಿಗಳಲ್ಲಿ ಕಲೆಯ ಜಾಗೃತಿ ಮೂಡುವ ಕೆಲಸವಾಗಬೇಕಿದೆ ಇದಕ್ಕೆ ಪಾಲಕರ ಪ್ರೋತ್ಸಾಹ ಅವಶ್ಯಕವಾಗಿದೆ ಎಂದು ಹೇಳಿದರು.
ಯಕ್ಷಗಾನದ ಕಲಾವಿದ ಅಶೋಕ ಭಟ್ಟ ಮಾತನಾಡಿ, ಯಕ್ಷಗಾನ ನಮ್ಮ ನಾಡಿನ ಮಣ್ಣಿನ ಕಲೆಯಾಗಿದೆ ಈ ಕಲೆಯನ್ನು ಅಭ್ಯಸಿಸಿ – ಉಳಿಸಿ – ಬೆಳೆಸುವ ಕೆಲಸವನ್ನು ಎಲ್ಲರೂ ಕೈಜೋಡಿಸುವ ಮೂಲಕ ಮಾಡಬೇಕು.
ಸಂಕಲ್ಪ ಸಂಸ್ಥೆಯ ಪಿ. ಬಿ. ಹೊಸೂರುರವರು ಬಡಮಕ್ಕಳ ಕಲಾ ಕಲಿಕೆಗೆ ಧನಸಹಾಯ ನೀಡುವುದಾಗಿ ಘೋಷಿಸಿದರು. ಯಕ್ಷಗಾನ ತರಬೇತುದಾರ ಹವ್ಯಾಸಿ ಕಲಾವಿದ ಜೈಕುಮಾರ ನಾಯ್ಕ ಮಾತನಾಡಿದರು.ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ತನುಶ್ರೀ ತಂಡದವರು ಪ್ರಾರ್ಥನಾಗೀತೆ ಹಾಡಿದರು. ನಾಗರಾಜ ಭಂಡಾರಿ ಸ್ವಾಗತಿಸಿದರು.
ನಂತರ ವಿದ್ಯಾರ್ಥಿಗಳಿಗೆ ಯಕ್ಷಗಾನದ ಪ್ರಾಥಮಿಕ ಹೆಜ್ಜೆ ಕಲಿಸುವ ಮೂಲಕ ಕಲಿಕೆಗೆ ಚಾಲನೆ ನೀಡಲಾಯಿತು.
ಸಿದ್ದಾಪುರ ಹೊಸೂರು ಪ್ರಾತಮಿಕ ಶಾಲೆಯಲ್ಲಿ ನಡೆದ ಯಕ್ಷಗಾನ ತರಬೇತಿ ಶಿಬಿರವನ್ನು ಉದ್ಘಾಟಿಸಿ ಶಂಕರ ಭಟ್ಟ ಮಾತನಾಡಿದರು. ಎಂ.ಕೆ.ನಾಯ್ಕ,ಅಶೋಕ ಭಟ್ಟ,ಪಿ.ಬಿ.ಹೊಸೂರು ಮುಂತಾದವರು ಉಪಸ್ಥಿತರಿದ್ದರು.