ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಕಾರ ಮಳೆ; ಜನಜೀವನ ಅಸ್ತವ್ಯಸ್ತ

ಚಿಕ್ಕಮಗಳೂರು, ಜು.19: ಜಿಲ್ಲೆಯ ಹಲವು ತಾಲೂಕುಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಮೂಡಿಗೆರೆ, ಕಳಸ, ಕೊಪ್ಪ, N.R.ಪುರ ತಾಲೂಕಿನಲ್ಲಿ ಮುಂಜಾನೆಯಿಂದ ಭರ್ಜರಿ ಮಳೆಯಾಗುತ್ತಿದ್ದು, ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಹೌದು ರಭಸವಾಗಿ ಬೀಸುತ್ತಿರುವ ಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು, ಮೂಡಿಗೆರೆತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್​ನಲ್ಲಿ ವಾಹನಗಳ ಸಂಚಾರಕ್ಕೆ ಸಮಸ್ಯೆಯುಂಟಾಗಿದೆ. ಇನ್ನು ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ನಿರಂತರ ಮಳೆಗೆ ಉದ್ಘಾಟನೆಗೂ ಮುನ್ನವೇ ಕುಸಿಯುವ ಹಂತ ತಲುಪಿದ ಸೇತುವೆ

ಇನ್ನು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುಗುರಳ್ಳಿ ಗ್ರಾಮದ ಬಳಿ ಹೊಸದಾಗಿ ನಿರ್ಮಿಸಲಾಗಿದ್ದ ಸೇತುವೆ ತಡೆಗೋಡೆ ಕುಸಿಯುತ್ತಿದ್ದು, ಧಾರಾಕಾರ ಮಳೆಗೆ ರಸ್ತೆ ಬಿರುಕು ಬಿಟ್ಟಿದೆ. ಮುಗುರಳ್ಳಿ ಸೇರಿದಂತೆ ನಾಲ್ಕು ಗ್ರಾಮಗಳಿಗೆ ಈ ಸೇತುವೆ ಸಂಪರ್ಕಿಸುತ್ತದೆ. ಇದೀಗ ಸೇತುವೆ ಅವೈಜ್ಞಾನಿಕ ಕಾಮಗಾರಿಯಿಂದ ಕುಸಿಯುವ ಹಂತ ತಲುಪಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಇನ್ನು ನಾಲ್ಕು ವರ್ಷದ ಹಿಂದೆ ಸುರಿದ ಮಳೆಗೆ ಸೇತುವೆ ಸಂಪೂರ್ಣ ಕುಸಿದಿತ್ತು. ಈ ಹಿನ್ನಲೆ ಹಳೆಯ ಸೇತುವೆ ಬಳಿ ನೂತನವಾಗಿ ಸೇತುವೆ ನಿರ್ಮಿಸಲಾಗಿತ್ತು. ಇದೀಗ ಇದು ಕೂಡ ಕುಸಿಯುವ ಭೀತಿ ಎದುರಾಗಿದೆ.