14 ಜನರಲ್ಲಿ ಯಾರನ್ನು ಮದುವೆಯಾಗಲಿ?; ನೆಟ್ಟಿಗರ ಸಹಾಯ ಕೋರಿದ ಯುವತಿ

ತನ್ನ ನಿರೀಕ್ಷೆಗೆ ತಕ್ಕಂಥ ಸಂಗಾತಿ ಬೇಕೆಂದು ಹುಡುಗನೂ ಬಯಸುತ್ತಾನೆ, ಹುಡುಗಿಯೂ. ಇದಕ್ಕೆ ಆನ್​ಲೈನ್​ ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ಗಳು ಸಾಥ್​ ಕೊಡುತ್ತ ಮೂರು ದಶಕಗಳೇ ಕಳೆದವು. ಸಾಕಷ್ಟು ಜನರ ಮದುವೆಗೂ ಇವು ಸಾಕ್ಷಿಯಾದವು ಮತ್ತು ಆಗುತ್ತಲೇ ಇವೆ. ಆದರೆ ಇಲ್ಲೊಬ್ಬಳು ಹುಡುಗಿ ಆಯ್ಕೆಯ ಗೊಂದಲದಲ್ಲಿದ್ದಾಳೆ. 14 ಹುಡುಗರನ್ನು ಶಾರ್ಟ್​ಲಿಸ್ಟ್ ಮಾಡಿದ ಆಕೆ ಯಾವ ಹುಡುಗನನ್ನು ಮದುವೆಯಾದರೆ ಒಳ್ಳೆಯದು ಎಂದು ನೆಟ್ಟಿಗರಲ್ಲಿ ಸಲಹೆ ಕೇಳಿದ್ದಾಳೆ. ಈಕೆ ಲಿಸ್ಟ್ ಮಾಡಿದ ಹುಡುಗರು ಬೈಜೂಸ್​, ಡೆಲಾಯ್ಡ್​, ಟಿಸಿಎಸ್​ ಮುಂತಾದ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರ ವಾರ್ಷಿಕ ಆದಾಯ ರೂ. 14 ಲಕ್ಷದಿಂದ ರೂ 45 ಲಕ್ಷ.

ನನಗೆ 29 ವರ್ಷ. ಬಿಕಾಂ ಓದಿದ್ದೇನೆ ಆದರೆ ಸದ್ಯ ಉದ್ಯೋಗದಲ್ಲಿಲ್ಲ. ಈ 14 ಹುಡುಗರೊಂದಿಗೆ ಸಂವಹನ ನಡೆಸುತ್ತಿದ್ದೇನೆ. ಆದರೆ ಮದುವೆಯಾಗಲು ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲದಲ್ಲಿದ್ದೇನೆ, ದಯವಿಟ್ಟು ಸಹಾಯ ಮಾಡಿ’ ತಪ್ಪೊಪ್ಪಿಗೆ ಎಂಬ ಶೀರ್ಷಿಕೆಯಡಿ ಈಕೆ ಆ ವಿವಾಹಾಕಾಂಕ್ಷಿಗಳ ವಯಸ್ಸು, ಊರು, ಕಂಪೆನಿ, ವಾರ್ಷಿಕ ಆದಾಯವನ್ನು ಪಟ್ಟಿ ಮಾಡಿದ್ದಾಳೆ. ಈ ಪಟ್ಟಿ ಅಂತರ್ಜಾಲದಲ್ಲಿ ಭಾರೀ ಚರ್ಚೆಗೀಡು ಮಾಡುತ್ತಿದೆ.

ಆದರೆ ರೂ. 45 ಲಕ್ಷ ವಾರ್ಷಿಕ ಆದಾಯವಿರುವ ವ್ಯಕ್ತಿಗಳು, ವೈದ್ಯರುಗಳು ನಿರುದ್ಯೋಗಿಯಾಗಿರುವ ಈ ಹುಡುಗಿಯೆಡೆ ಆಸಕ್ತಿ ತೋರಿಸುತ್ತಿದ್ದಾರೆಂದರೆ, ಅವರಿಗೆ ತುಂಬಾ ಮುಖ್ಯವಾದಂಥ ಯಾವುದೇ ನ್ಯೂನತೆಗಳು ಇಲ್ಲ ತಾನೇ? ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಈಕೆ ಯಾಕೆ ಉದ್ಯೋಗದಲ್ಲಿಲ್ಲ? ಈಕೆ ತಾನು ಮದುವೆಯಾಗಬಯಸುವ ಹುಡುಗರಿಂದ ಏನನ್ನು ನಿರೀಕ್ಷಿಸುತ್ತಿದ್ದಾಳೆ? ಎಂದೂ ಕೇಳುತ್ತಿದ್ಧಾರೆ.