ಸರ್ಕಾರದಿಂದ ವ್ಯಾಟ್ಸ್ಆ್ಯಪ್ ಮೆಸೇಜ್, ವಿಡಿಯೋ ಆಡಿಯೋ ಕಾಲ್ ರೆಕಾರ್ಡ್ ಸುದ್ದಿ ಸುಳ್ಳು!

ನವದೆಹಲಿ(ಜು.02): ವ್ಯಾಟ್ಸ್ಆ್ಯಪ್ ಸೇರಿದಂತೆ ಹಲವು ಮೆಸೇಜಿಂಗ್ ಪ್ಲಾಟ್‌ಫಾರ್ಮ್, ಸಾಮಾಜಿಕ ಮಾಧ್ಯಮದಲ್ಲಿ ಸಂದೇಶವೊಂದು ಹರಿದಾಡುತ್ತಿದೆ. ನೀವು ಕಳುಹಿಸುವ ಪ್ರತಿಯೊಂದು ವ್ಯಾಟ್ಸ್ಆ್ಯಪ್ ಸಂದೇಶವನ್ನು ಕೇಂದ್ರ ಸರ್ಕಾರ ಮಾನಿಟರ್ ಮಾಡುತ್ತದೆ. ಆಡಿಯೋ-ವಿಡಿಯೋ ಕಾಲ್ ರೆಕಾರ್ಡ್ ಮಾಡಲಾಗುತ್ತಿದೆ. ಇನ್ನು ವ್ಯಾಟ್ಸ್ಆ್ಯಪ್ ಗ್ರೂಪ್ ನಿಯಮದಲ್ಲೂ ಮಹತ್ತರ ಬದಲಾವಣೆ ಮಾಡಲಾಗಿದೆ. ಒಂದು ಟಿಕ್ ಇದ್ದರೆ ಮಸೇಜ್ ಸೆಂಡ್ ಆಗಿದೆ ಎಂದು ಆರ್ಥ.ಅದೇ 3 ರೆಡ್ ಟಿಕ್ ಇದ್ದರೆ ನಿಮ್ಮ ವಿರುದ್ದ ಕೇಂದ್ರ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ. ಶೀಘ್ರದಲ್ಲೇ ಸಮನ್ಸ್ ಬರಲಿದೆ ಎಂದರ್ಥ ಎಂಬ ಸಂದೇಶ ಹರಿದಾಡುತ್ತಿದೆ. ಈ ಸಂದೇಶ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಟೀಕಿಸುವ, ಕೇಂದ್ರದ ವಿರುದ್ದ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಸಂದೇಶ ಕೋಲಾಹ ಸೃಷ್ಟಿಸುತ್ತಿದ್ದಂತೆ ಕೇಂದ್ರ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಸಚಿವಾಲಯ ಸ್ಪಷ್ಟನೆ ನೀಡಿದೆ. ಇದು ಸುಳ್ಳು ಸುದ್ದಿ. ಈ ರೀತಿಯ ಯಾವುದೇ ನಿಯವನ್ನು ಕೇಂದ್ರ ಸರ್ಕಾರವಾಗಲಿ, ವ್ಯಾಟ್ಸ್ಆ್ಯಪ್ ಆಗಲಿ ಜಾರಿ ಮಾಡಿಲ್ಲ ಎಂದಿದೆ.