ಟೆಸ್ಲಾ ಸಿಎಒ ಎಲಾನ್ ಮಸ್ಕ್ ಅವರು ಟ್ವಿಟರ್ ಅನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡ ಬಳಿಕ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಇದೀಗ ಶನಿವಾರ ರಾತ್ರಿಯಿಂದ ಭಾರತ ಸೇರಿದಂತೆ ವಿಶ್ವದ ಅನೇಕ ಭಾಗಗಳಲ್ಲಿ ಟ್ವಿಟರ್ ಸರ್ವರ್ ಡೌನ್ ಎಂದು ವರದಿ ಆಗಿದೆ. ಮಸ್ಕ್ ಒಡೆತನದ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಈ ವರ್ಷ ಎದುರಿಸುತ್ತಿರುವ ಮೂರನೇ ಟ್ವಿಟರ್ ಡೌನ್ ಇದಾಗಿದೆ. ಭಾರತ, ಅಮೆರಿಕ ಸೇರಿ ಜಗತ್ತಿನ ಬಹುತೇಕ ದೇಶಗಳಲ್ಲಿ ಟ್ವಿಟರ್ ಡೌನ್ ಆಗಿದ್ದು, ಸಾವಿರಾರು ಜನರಿಗೆ ಸೈಟ್ ರಿಫ್ರೆಶ್ ಆಗುತ್ತಿಲ್ಲ ಎಂದು ದೂರುತ್ತಿದ್ದಾರೆ.
ಟ್ವಿಟರ್ ಬಳಸುವ ಬಹುತೇಕ ಜನರು ಪೇಜ್ ಲೋಡ್ ಆಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ‘Something went wrong. Try reloading’ ಹಾಗೂ ‘cannot retrieve tweets’ ಎಂದು ಬರುತ್ತಿದೆ. ಮೊಬೈಲ್ ಆ್ಯಪ್‌ನಲ್ಲಿ ಸಾಮಾಜಿಕ ಜಾಲತಾಣವನ್ನು ಬಳಸುವವರಿಗೆ “Cannot Retrieve Tweets” ಎಂಬ ಎರರ್ ಬರುತ್ತಿದೆ. ಡೌನ್ ಡಿಟೆಕ್ಟರ್ ಮಾಡಿರುವ ವರದಿಯ ಪ್ರಕಾರ, ಸುಮಾರು 4,000 ಬಳಕೆದಾರರು ಟ್ವಿಟರ್‌ನ ಕಾರ್ಯನಿರ್ವಹಣೆಯ ಸಮಸ್ಯೆಗಳನ್ನು ಪ್ರಕಟಿಸಿದ್ದಾರೆ ಎಂದು ಹೇಳಿದೆ. ಆದರೆ, ಟ್ವಿಟರ್ ಈ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಟ್ವಿಟರ್ನಲ್ಲೇ ಟ್ವಿಟರ್ಡೌನ್ ಎಂಬ ಹ್ಯಾಷ್ಟಾಗ್ ಟ್ರೆಂಡಿಂಗ್ನಲ್ಲಿ ಕಾಣಿಸಿಕೊಂಡಿದ್ದು 25 ಸಾವಿರಕ್ಕೂ ಅಧಿಕ ಮಂದಿ ಈ ಕುರಿತು ಟ್ವೀಟ್ ಮಾಡಿದ್ದಾರೆ.
ಆಕ್ಷೇಪಾರ್ಹ ಟ್ವಿಟರ್ ಪೋಸ್ಟ್ ಗಳನ್ನು ತೆಗೆಯಬೇಕೆಂಬ ಕೇಂದ್ರ ಸರ್ಕಾರದ ಸೂಚನೆ ಪಾಲಿಸದ ಟ್ವಿಟರ್ಗೆ ತೀವ್ರ ಹಿನ್ನಡೆಯಾಗಿದೆ. ಕೇಂದ್ರ ಸರ್ಕಾರದ ಸೂಚನೆಗಳನ್ನು ರದ್ದುಪಡಿಸುವಂತೆ ಕೋರಿದ್ದ ಟ್ವಿಟರ್ ಸಂಸ್ಥೆಯ ರಿಟ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೇ ಕೇಂದ್ರ ಸರ್ಕಾರದ ಸೂಚನೆ ಪಾಲಿಸಲು ವಿಳಂಬ ಮಾಡಿದ ಸಂಸ್ಥೆಯ ನಡವಳಿಕೆ ಖಂಡಿಸಿರುವ ಹೈಕೋರ್ಟ್ ಟ್ವಿಟರ್ ಸಂಸ್ಥೆಗೆ 50 ಲಕ್ಷ ರೂ. ದಂಡವನ್ನೂ ವಿಧಿಸಿದೆ. ದಂಡದ ಹಣವನ್ನು 45 ದಿನಗಳಲ್ಲಿ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು. ದಂಡ ಪಾವತಿಸಲು ತಪ್ಪಿದಲ್ಲಿ ಪ್ರತಿನಿತ್ಯ 5 ಸಾವಿರ ದಂಡ ವಿಧಿಸುವುದಾಗಿಯೂ ಹೈಕೋರ್ಟ್ ಎಚ್ಚರಿಕೆ ನೀಡಿದೆ.