ಡಾ. ರಾಜ್ಕುಮಾರ್ ಅವರ ಕುಟುಂಬಕ್ಕೆ ಆಘಾತ ತರುವಂತಹ ಘಟನೆ ನಡೆದಿದೆ. ಪಾರ್ವತಮ್ಮ ರಾಜ್ಕುಮಾರ್ ಅವರ ತಮ್ಮನ ಪುತ್ರನಾದ ಸೂರಜ್ ಅವರು ಅಪಘಾತಕ್ಕೆ ಒಳಗಾಗಿದ್ದಾರೆ. ಊಟಿಗೆ ತೆರಳುತ್ತಿದ್ದ ಅವರಿಗೆ ನಂಜನಗೂಡಿನ ಬಳಿ ಲಾರಿ ಡಿಕ್ಕಿ ಆಗಿದೆ. ಶನಿವಾರ (ಜೂನ್ 24) ಸಂಜೆ ನಾಲ್ಕು ಗಂಟೆ ಸುಮಾರಿಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂಲಗಳ ಪ್ರಕಾರ ಅವರ ಕಾಲಿಗೆ ತೀವ್ರವಾಗಿ ಪೆಟ್ಟಾಗಿದೆ. ಪರಿಣಾಮವಾಗಿ ಕಾಲು ಕತ್ತರಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಂಧಿನಗರಕ್ಕೆ ಎಂಟ್ರಿ ನೀಡಬೇಕು ಎಂದು ಸೂರಜ್ ಅವರು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ‘ಭಗವಾನ್ ಶ್ರೀಕೃಷ್ಣ ಪರಮಾತ್ಮ’ ಸೇರಿದಂತೆ ಒಂದೆರಡು ಸಿನಿಮಾಗಳನ್ನು ಅವರು ಅನೌನ್ಸ್ ಮಾಡಿದ್ದರು. ಅಷ್ಟರಲ್ಲಾಗಲೇ ಅವರಿಗೆ ಈ ದುಸ್ಥಿತಿ ಎದುರಾಗಿದೆ.