ಬೆಳಗಾವಿಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆಗೆ ಕೂಡಿಬರದ ಮುಹೂರ್ತ

ಬೆಳಗಾವಿ: ಕಂದಾಯ ವಿಭಾಗದ ವ್ಯಾಪ್ತಿಯ ಜಿಲ್ಲೆಗಳ ಜನರಿಗೆ ಅನುಕೂಲವಾಗಲೆಂದು ನಗರದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗಿದೆ. ಆದ್ರೆ 197.27 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಲೋಕಾರ್ಪಣೆ ಭಾಗ್ಯ ಮಾತ್ರ ಇನ್ನೂ ಸಿಕ್ಕಿಲ್ಲ. ಹೀಗಾಗಿ ಇಷ್ಟೊಂದು ಕೋಟಿ ಹಣ ಖರ್ಚು ಮಾಡಿ ಆಸ್ಪತ್ರೆ ಕಟ್ಟಿದರೂ ಲೋಕಾರ್ಪಣೆಯಾಗದ ಹಿನ್ನೆಲೆ ಕಟ್ಟಡ ಯಾವುದೇ ಪ್ರಯೋಜನಕ್ಕೆ ಇಲ್ಲದಂತಾಗಿದೆ ಎಂದು ಜಿಲ್ಲೆಯ ಜನರು ಅಸಮಾಧಾನ ಹೊರ ಹಾಕಿದ್ದಾರೆ.

2017ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿಗೆ ಮಂಜೂರು ನೀಡಲಾಗಿತ್ತು. ಬಳಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಆಮೆಗತಿಯಲ್ಲಿ ಸಾಗಿತ್ತು. ಸದ್ಯ ಈಗ 250 ಬೆಡ್‌ಗಳ ಸಾಮರ್ಥ್ಯದ ಸುಸಜ್ಜಿತ ನಾಲ್ಕು ಮಹಡಿಯ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಈಗಾಗಲೇ ಶೇಕಡ 90ರಷ್ಟು ಕಾಮಗಾರಿ ಮುಗಿದಿದ್ದು ವೈದ್ಯಕೀಯ ಉಪಕರಣ ಅಳವಡಿಕೆ, ಬೋಧಕ, ಬೋಧಕೇತರ ಸಿಬ್ಬಂದಿ ನೇಮಕವಾಗಬೇಕಾದ ಅಗತ್ಯತೆ ಇದೆ. ಬೋಧಕ, ಬೋಧಕೇತರ ಸಿಬ್ಬಂದಿ, ತಜ್ಞ ವೈದ್ಯರ ನೇಮಕ, ವೈದ್ಯಕೀಯ ಉಪಕರಣಗಳ ಅಳವಡಿಕೆಗೆ ಬಿಮ್ಸ್ ನಿರ್ದೇಶಕರು ಈಗಾಗಲೇ ಎರಡು ಬಾರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದ್ರೆ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ.

ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆಗೊಂಡರೆ ನೆರೆಯ ಮೂರು ಜಿಲ್ಲೆಗಳಿಗೂ ಅನುಕೂಲ ಆಗಲಿದೆ. ಬೆಳಗಾವಿ ಸೇರಿ ನೆರೆಯ ಧಾರವಾಡ, ಬಾಗಲಕೋಟೆ, ವಿಜಯಪುರ ಗಡಿಭಾಗದ ಜನರಿಗೂ ಅನುಕೂಲವಾಗಲಿದೆ. ಕರ್ನಾಟಕ ಮಹಾರಾಷ್ಟ್ರ ಗೋವಾಗೆ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿ ನಗರಕ್ಕೆ ನಿತ್ಯ ಮಹಾರಾಷ್ಟ್ರ ಗೋವಾದಿಂದಲೂ ನೂರಾರು ರೋಗಿಗಳು ಆಗಮಿಸುತ್ತಾರೆ. ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುವ ಬಡ ರೋಗಿಗಳಿಗೆ ತೀವ್ರ ಸಮಸ್ಯೆ ಇದ್ದು ಬೆಳಗಾವಿಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ವರದಾನವಾಗಲಿದೆ. ಸದ್ಯ ಈಗ ನರರೋಗ, ಹೃದ್ರೋಗದಂತ ಸಮಸ್ಯೆಗಳಿಗೆ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾದ ಸ್ಥಿತಿ ಇದೆ. ಹೀಗಾಗಿ ಆದಷ್ಟು ಬೇಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇನ್ನು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆಗೊಳ್ಳದ ವಿಚಾರಕ್ಕೆ ಸಂಬಂಧಿಸಿ ಟಿವಿ9ಗೆ ಬಿಮ್ಸ್ ನಿರ್ದೇಶಕ ಡಾ.ಅಶೋಕ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಶೇಕಡ 98ರಷ್ಟು ಪೂರ್ಣಗೊಂಡಿದೆ. ಬೋಧಕ, ಬೋಧಕೇತರ ಸಿಬ್ಬಂದಿ ನೇಮಕ ಆಗಬೇಕಿದೆ. ವೈದ್ಯಕೀಯ ಉಪಕರಣಗಳನ್ನು ಅಳವಡಿಕೆ ಮಾಡಬೇಕಾಗಿದೆ. 2021, 2022ರಲ್ಲಿ ಎರಡು ಬಾರಿ ಸರ್ಕಾರಕ್ಕೆ 131 ಕೋಟಿ ರೂಪಾಯಿ ಮೊತ್ತದ ಪ್ರಸ್ತಾವನೆ ಸಲ್ಲಿಸಿದ್ದೇವೆ. ಈಗಾಗಲೇ ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿಯಾಗಿ ಮನವಿ ಮಾಡಿದ್ದೇನೆ. ವೈದ್ಯಕೀಯ ಉಪಕರಣ ಹಾಗೂ ಸಿಬ್ಬಂದಿ ನೇಮಕ ಆದ್ರೆ ಕಾರ್ಯಾರಂಭ ಮಾಡುತ್ತೇವೆ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಿಂದ ಬೆಳಗಾವಿ ಜನತೆಗೆ ಬಹಳ ಅನುಕೂಲ ಆಗುತ್ತೆ. ಉದಾಹರಣೆಗೆ ನಮ್ಮಲ್ಲಿ ನ್ಯೂರೋಸರ್ಜರಿ ಪ್ರಕರಣಗಳು ಬಂದ್ರೆ ಕೆಎಲ್‌ಇ ಆಸ್ಪತ್ರೆಗೆ ರೆಫರ್ ಮಾಡುತ್ತೇವೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾರಂಭ ಆದ್ರೆ ಜನರಿಗೆ ಅನುಕೂಲ ಆಗುತ್ತೆ ಎಂದು ಬೆಳಗಾವಿಯಲ್ಲಿ ಟಿವಿ9ಗೆ ಬಿಮ್ಸ್ ಆಸ್ಪತ್ರೆ ನಿರ್ದೇಶಕ ಡಾ.ಅಶೋಕ್ ಶೆಟ್ಟಿ ತಿಳಿಸಿದರು.