ಅಮೆರಿಕದ ಇಲಿನಾಯ್ಸ್ನ ಟೇಝ್ವೆಲ್ ಕೌಂಟಿಯ ಹಳೆಯ ಮನೆಯೊಂದರ ಗೋಡೆಯೊಳಗೆ ಬಚ್ಚಿಟ್ಟಿದ್ದ ಬಾಟಲಿಯಲ್ಲಿ ಈ ನೋಟ್ ಪತ್ತೆಯಾಗಿದೆ. 48 ವರ್ಷಗಳ ಹಿಂದೆ 14 ವರ್ಷಗಳ ಹುಡುಗಿಯೊಬ್ಬಳು ಎರಡು ಪುಟಗಳ ಈ ನೋಟ್ ಬರೆದಿದ್ದಾಳೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸ್ಟೆಫಾನಿ ಹೆರಾನ್ ಎಂಬಾಕೆ 29.9.1975 ರಂದು ಬರೆದ ನೋಟ್ ಇದಾಗಿದೆ. ಬಡಗಿ ಡಕೋಟಾ ಮೊಹ್ನ್ ಈ ನೋಟ್ನೊಂದಿಗೆ ಸ್ಪೆಫಾನಿಯನ್ನೂ ಪತ್ತೆಹಚ್ಚಿದ್ದಾನೆ.
‘ನನ್ನ ತಂಡ ಈ ಮನೆಯ ಮುಂಭಾಗದ ಕೋಣೆಯ ಗೋಡೆಯನ್ನು ಕೆಡವಿದರು. ನಾನು ಅದರೊಳಗಿನ ಅವಶೇಷಗಳನ್ನು ಶುಚಿಗೊಳಿಸುತ್ತಿದ್ದಾಗ ನೋಟ್ ಎಂದು ಬರೆದದ್ದು ಕಂಡಿತು. ಜೊತೆಗೆ ಪುಟ್ಟ ಬಾಟಲಿಯೂ ಇತ್ತು. ಆ ಬಾಟಲಿಯೊಳಗೆ ಈ ಚೀಟಿ ಇತ್ತು. ತಕ್ಷಣವೇ ಮೊಬೈಲಿನಿಂದ ಫೋಟೋ ತೆಗೆದುಕೊಂಡು ಫೇಸ್ಬುಕ್ಗೆ ಅಪ್ಲೋಡ್ ಮಾಡಿದೆ.’ ಎಂದಿದ್ಧಾನೆ ಬಡಗಿ ಡಕೋಟಾ ಮೊಹ್ನ್.
ನಂತರ ಸ್ಟೆಫಾನಿ ಹೆರಾನ್ನ ಸಹೋದರಿ ಅಮಂಡಾ ಬಿರ್ಕಿ ಫೇಸ್ಬುಕ್ ಪೋಸ್ಟ್ ನೋಡಿದವರೇ, ‘ಸ್ಟೆಫಾನಿ ನನ್ನ ಸಹೋದರಿ.” ಎಂದು ಪ್ರತಿಕ್ರಿಯಿಸಿದ್ದಾರೆ. ಸ್ಟೆಫಾನಿ ಕೂಡ ಇದೇ ಪೋಸ್ಟ್ನಲ್ಲಿ ಪ್ರತಿಕ್ರಿಯಿಸಿದ್ದಾರೆ; ‘ಹೌದು ನಾನೇ ಈ ನೋಟ್ ಬರೆದಿರುವುದು. ನನ್ನ ಅಮ್ಮ ಈ ಸಮಯದಲ್ಲಿ ಗರ್ಭಿಣಿಯಾಗಿದ್ದರು. ಇದನ್ನು ಬರೆದ ಮರುದಿನವೇ ನನ್ನ ತಂಗಿ ಜನಿಸಿದಳು’ ಎಂದಿದ್ದಾರೆ. ಸ್ಟೆಫಾನಿ ಹೆರಾನ್ಗೆ ಈಗ 61 ವರ್ಷ. ಅವರೀಗ ಸ್ಟೆಫಾನಿ ಪೋಯ್ಟ್. ಆಕೆ ತನ್ನ ಗಂಡ ಮತ್ತು ಐದು ಮಕ್ಕಳೊಂದಿಗೆ ನ್ಯೂಯಾರ್ಕ್ನಲ್ಲಿ ವಾಸವಾಗಿದ್ದಾರೆ.
‘ಈ ನೋಟ್ ಸಿಕ್ಕ ವಿಷಯ ನನ್ನನ್ನು ದಿಗ್ಭ್ರಮೆಗಳಿಸಿದೆ. ನಾನಿದನ್ನೆಲ್ಲವನ್ನೂ ಮರೆತಿದ್ದೆ. ಆದರೆ ವರ್ಷಗಳು ಉರುಳಿದರೂ ಬದುಕು ನಿಲ್ಲುವುದಿಲ್ಲ. ನಾನು ಗ್ರೀನ್ವ್ಯಾಲಿಯಲ್ಲಿ ಬಾಲ್ಯ ಕಳೆದೆ. ಅಲ್ಲಿರುವವರಿಂದ ಪ್ರತಿಕ್ರಿಯೆಗಳನ್ನು ಓದುತ್ತಿದ್ದೇನೆ. ಪ್ರತಿಕ್ರಿಯಿಸಿರುವವರ ಪೈಕಿ ಪರಿಚಯವಿಲ್ಲದ ಶಿಕ್ಷಕರು, ವಿದ್ಯಾರ್ಥಿಗಳೂ ಇದ್ದಾರೆ. ಮನಸ್ಸು ತುಂಬಿಬಂದಿದೆ. ಫೇಸ್ಬುಕ್ಗೆ ಧನ್ಯವಾದ’ ಎಂದಿದ್ದಾರೆ ಸ್ಟೆಫಾನಿ.