ಪ್ರತೀ ವರ್ಷದ ಮಳೆಗೆ ಮುಂಬೈ ಅಮಾಯಕ ಬಾಲಕನಂತೆ ಗಡಗಡ ನಡುಗಿ ತತ್ತರಿಸುತ್ತದೆ. ಏನೆಲ್ಲ ಕಳೆದುಕೊಂಡರೂ ಮತ್ತೆ ಮೆಲ್ಲಗೆ ಮೈ ಝಾಡಿಸಿಕೊಂಡು ಎದ್ದು ನಿಲ್ಲುತ್ತದೆ. ಪ್ರೀತಿಯಿಂದ ಪ್ರವಾಸಿಗರನ್ನು ಕರೆಯುತ್ತದೆ. ಸ್ಥಳೀಯರನ್ನು ಮಮತೆಯಿಂದ ಪೊರೆಯುತ್ತದೆ. ಆದರೆ ವರುಣನ ಆರ್ಭಟದಿಂದ ತಪ್ಪಿಸಿಕೊಳ್ಳುವಲ್ಲಿ ಮಾತ್ರ ಇದು ಅಸಹಾಯಕವಾಗುತ್ತಿದೆ. ಮುಂಬೈನ ಈ ಸಮಸ್ಯೆಗೆ AI ಕೃತಕ ಬುದ್ಧಿಮತ್ತೆ ಕಲಾವಿದರು ಅಲ್ಲಿಯ ಜನರಿಗೇ ಹೊಸ ಪರಿಹಾರವನ್ನು ಕಂಡುಕೊಳ್ಳಲು ಸೂಚಿಸಿದ್ಧಾರೆ. ಗಾಜಿನಿಂದ ಆವೃತವಾದ ದ್ವಿಚಕ್ರವಾಹನ, ಬಸ್, ಬೋಟ್, ಟೆಂಪೋ, ರಕ್ಷಣಾ ಪಡೆಗಳ ವಾಹನಗಳನ್ನು ತಯಾರಿಸಿದ್ಧಾರೆ. ಇದೀಗ ಶರವೇಗದಲ್ಲಿ ಈ ಕಲಾಕೃತಿಗಳು ವೈರಲ್ ಆಗುತ್ತಿವೆ.
ಮನೋಜ್ ಓಮ್ರೆ ಎಂಬ ಎಐ ಪ್ರೋಗ್ರ್ಯಾಂ ಮೂಲಕ ಈ ಚಿತ್ರಗಳನ್ನು ಸೃಷ್ಟಿಸಿದ್ದಾರೆ. ನಾಲ್ಕು ದಿನಗಳ ಹಿಂದೆ ಮಾಡಿದ ಈ ಪೋಸ್ಟ್ ಅನ್ನು ಈತನಕ ಸುಮಾರು 8,000 ಜನರು ಇಷ್ಟಪಟ್ಟಿದ್ದಾರೆ. ಇದು ತುಂಬಾ ಸುಂದರ ಮತ್ತು ಅರ್ಥಪೂರ್ಣ ಆಲೋಚನೆ ಎಂದಿದ್ದಾರೆ ನೆಟ್ಟಿಗರು. ಇಂಥ ಆಲೋಚನೆಗಳು ನಿಮಗೊಬ್ಬರಿಗೇ ಹೊಳೆದಿರಲು ಸಾಕು, ಭೇಷ್ ಎಂದಿದ್ದಾರೆ ಕೆಲವರು. ಈ ಹಿಂದೆ, ತಾಜ್ ಮಹಲ್ ಎಯ ಚಿತ್ರಗಳನ್ನು ಕಲಾವಿದರೊಬ್ಬರು ಮಿಡ್ಜರ್ನಿ ಮೂಲಕವೇ ರಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇತ್ತೀಚೆಗೆ ಟ್ರೆಂಡ್ ಆಧಾರಿತ ಚಿತ್ರಗಳನ್ನು ರಚಿಸುವತ್ತ ಎಐ ಕಲಾವಿದರು ಹೆಚ್ಚು ಆಸ್ಥೆ ವಹಿಸುತ್ತಿದ್ದಾರೆ ಮತ್ತು ಜನಮೆಚ್ಚುಗೆಯನ್ನೂ ಗಳಿಸುತ್ತಿದ್ದಾರೇನೋ ನಿಜ. ಆದರೆ ಇತರೇ ಕ್ಷೇತ್ರಗಳಲ್ಲಿ ಎಐ ಮುಂದೆ ಏನೆಲ್ಲ ತಿರುಮಂತ್ರವನ್ನು ನೀಡುವುದೋ ಎಂದು ಸಾಫ್ಟ್ವೇರ್ ದೈತ್ಯರು ಚಿಂತಾಕ್ರಾಂತರಾಗುತ್ತಿರುವುದು ದಿನೇ ದಿನೇ ಹೆಚ್ಚುತ್ತಿದೆ. ಏನೇ ಆಗಲಿ ಹರಿವ ಹೊಳೆಯಲ್ಲಿ ಎಲ್ಲವೂ ತೇಲಿ ಹೋಗುತ್ತಿರುತ್ತದೆ. ಮತ್ತೆ ಹೊಸತು ಹುಟ್ಟುತ್ತಲೇ ಇರುತ್ತದೆ.