ರೇಲಿಂಗ್​ ಮೇಲೆ ಕೂಲಿ; ಇವು ತಿರುಮಲದ ಮೆಟ್ಟಿಲುಗಳು ಎನ್ನುತ್ತಿದ್ದಾರೆ ನೆಟ್ಟಿಗರು, ಹೌದೆ?

ಓದಲಿಲ್ಲ ಅಥವಾ ಹೆಚ್ಚು ಓದಲಿಲ್ಲ ಎಂಬ ಕಾರಣಕ್ಕೆ ಶ್ರಮದ ಕೆಲಸಗಳನ್ನೇನೋ ಮಾಡಬೇಕು. ಎಷ್ಟಂತ ಮೈಬಗ್ಗಿಸಿಯೇ ದುಡಿಯಬೇಕು? ತುಸುವಾದರೂ ತಲೆ ಎತ್ತಬೇಕು ಎನ್ನಿಸಿರಬೇಕು ಶ್ರಮಜೀವಿಗೆ. ತಲೆಯ ಮೇಲೆ ದೊಡ್ಡ ಡಬ್ಬಿಯನ್ನಿಟ್ಟುಕೊಂಡು ರೇಲರ್​ಗುಂಟ ಜಾರಿಬಿಟ್ಟಿದ್ದಾನೆ. ಎಷ್ಟು ನಿರಾಯಾಸವಾಗಿ ಇದನ್ನು ಸಾಧಿಸಿಕೊಂಡಿದ್ದಾನಲ್ಲ ಎಂದು ಅಚ್ಚರಿಯಾಗುವುದುಂಟು. ಯಾವ ಕೆಲಸವೂ ಅಷ್ಟೇ ಅಭ್ಯಾಸಬಲ, ಕೌಶಲ ಮತ್ತು ಆತ್ಮವಿಶ್ವಾಸದಿಂದ ಸಿದ್ಧಿಸುತ್ತದೆ.

ಈತ ಬ್ಯಾಲೆನ್ಸ್​ ಮಾಡಿರುವ ರೀತಿಗೆ ನಾನಂತೂ ಶರಣಾಗಿದ್ದೇನೆ. ಅವನ ಸ್ನಾಯುಗಳು ಅದೆಷ್ಟು ಬಲಿಷ್ಠವಾಗಿರಬೇಕು. ಇದು ಒಲಂಪಿಕ್​ ಆಟಗಳಲ್ಲಿ ಸೇರಬೇಕು. ಭಾರತೀಯ ಪ್ರತಿಭೆ ಇದು! ಈ ಮೆಟ್ಟಿಲುಗಲು ತಿರುಮಲದ್ದಲ್ಲವೆ? ಹಾಂ ಇದು ನಮ್ಮ ತಿರುಮಲ, ಬಾಲಾಜಿ ದೇವಸ್ಥಾನಕ್ಕೆ ಹೋಗುವ ಮೆಟ್ಟಿಲುಗಳಿವು. ಇವು ನಮ್ಮ ಊರಿನವ! ಅಂತೆಲ್ಲ ನೆಟ್ಟಿಗರು ಅಭಿಮಾನದಿಂದ ಪ್ರತಿಕ್ರಿಯಿಸಿದ್ದಾರೆ.

ನೀವು ತಿರುಮಲಕ್ಕೆ ಬಂದರೆ ಇಂಥ ಸಾಕಷ್ಟು ಅಚ್ಚರಿಗಳನ್ನು ಕಾಣಬಹುದು ಎಂದು ಕೆಲವರು ಹೇಳುತ್ತಿದ್ದಾರೆ. ಅಚ್ಚರಿ ಏನು ಬಂತು ಸ್ಮಾರ್ಟ್​ ಆಗಿ ಕೆಲಸ ಮಾಡಲು ಕಲಿಯಿರಿ ಎಂದು ಹೇಳುತ್ತಿದ್ದಾರೆ ಇವರು… ಎಂದು ಮತ್ತೊಬ್ಬರು ಹೇಳುತ್ತಿದ್ಧಾರೆ. ಈಗಾಗಲೇ ಈ ವಿಡಿಯೋ ಅನ್ನು ಸುಮಾರು 1,25,000 ಜನರು ನೋಡಿದ್ದಾರೆ. 200ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ.

ಏನೇ ಆಗಲಿ ಈಗಿನ ಕಾಲದಲ್ಲಿ ಶ್ರಮಕ್ಕಿಂತ ಸ್ಮಾರ್ಟ್​ನೆಸ್​ ಬಹಳ ಮುಖ್ಯ. ಅದನ್ನು ಅಳವಡಿಸಿಕೊಳ್ಳದವರು ಹಿನ್ನೆಲೆಗೆ ಸರಿಯುತ್ತಾರೆ. ಮುಂದೆ ಸಾಗಬೇಕೆಂದರೆ ಇಂಥ ಕೌಶಲಗಳನ್ನು ಅಳವಡಿಸಿಕೊಳ್ಳಲೇಬೇಕು. ತಲೆತಗ್ಗಿಸಿ, ಮೈಬಗ್ಗಿಸಿ ದುಡಿದರೆ ಮಾತ್ರ ಪ್ರಗತಿ ಎನ್ನುವ ಕಾಲ ಇದಲ್ಲ. ಓಡುತ್ತಿರುವ ಜಗತ್ತಿನಲ್ಲಿ ಓಡಲೇಬೇಕು. ನೀವು ನಿಂತರೆ, ಕುಸಿದರೆ ತಿರುಗಿ ನೋಡಲು ಕೂಡ ಯಾರಿಗೂ ಪುರುಸೊತ್ತಿಲ್ಲ. ಹಾಗಾಗಿ ಗಟ್ಟಿತನ ರೂಢಿಸಿಕೊಳ್ಳುವುದು ಮತ್ತು ಪರ್ಯಾಯಗಳನ್ನು ಕಂಡುಕೊಳ್ಳುವುದು ಅನಿವಾರ್ಯ. ನೀವೇನಂತೀರಿ?