ನಿಮಗೆಲ್ಲ ಬೆಟ್ಟಗುಡ್ಡಗಳನ್ನು ಹತ್ತುವುದು ಗೊತ್ತು. ಆದರೆ ರೈಲಿನೊಳಗೆ ಹೀಗೆ ಇವನ ಹಾಗೆ ಹತ್ತುವುದು ಗೊತ್ತೇ? ಗೊತ್ತಿದ್ದರೂ ಹೀಗೆಲ್ಲ ಯಾರಾದರೂ ಮಾಡಿಯಾರೇ? ಆದರೆ ಈ ವ್ಯಕ್ತಿ ಹೀಗೆ ಸೀಟು ಮತ್ತು ಕಂಬಿಗಳ ಸಹಾಯದಿಂದ ಕಿಕ್ಕಿರಿದ ಮಂದಿಯನ್ನೆಲ್ಲ ದಾಟಿಕೊಂಡು ಅಂತೂ ಆಪರೇಷನ್ ಟಾಯ್ಲೆಟ್ ಅನ್ನು ಸಂಪನ್ನಗೊಳಿಸಿದ್ದಾನೆ. ಛೆ ಯಾಕಿವನು ಹೀಗೆ ಮಾಡಿದ ಎನ್ನುತ್ತಿದ್ದೀರೇ? ಪಾಪ ಅವನಾದರೂ ಏನು ಮಾಡಿಯಾನು? ಶೌಚಾಲಯವನ್ನು ತಲುಪಲೇಬೇಕೆಂದರೆ ಇಂಥ ಮತ್ತು ಸಾಹಸ ಮಾಡದೇ ವಿಧಿಯಿಲ್ಲ ಎಂಬಂಥ ಪರಿಸ್ಥಿತಿ ಅಲ್ಲಿ ಉಂಟಾಗಿದೆ.
ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನನ್ನ ಕಸಿನ್ ಈ ವಿಡಿಯೋ ಕಳಿಸಿದ್ದಾನೆ. ಅವನ ಸ್ನೇಹಿತ ಶೌಚಾಲಯಕ್ಕೆ ದಾರಿ ಮಾಡಿಕೊಂಡು ಸಾಗಲು ಪ್ರಯತ್ನಿಸುತ್ತಿದ್ದಾನೆ. ಧನ್ಯವಾದ ರೈಲು ಪ್ರಯಾಣವನ್ನು ಹೀಗೆ ಸಾಹಸತಾಣವನ್ನಾಗಿಸಿದ್ದಕ್ಕೆ ಎಂದು ಕೇಂದ್ರ ರೈಲ್ವೇ ಸಚಿವರಿಗೆ ಟ್ಯಾಗ್ ಮಾಡಿದ್ದಾರೆ ಅಭಿಜೀತ್ ದಿಪ್ಕೆ ಎನ್ನುವವರು. ಈ ವಿಡಿಯೋ ಅನ್ನೂ ಅನೇಕ ಟ್ವಿಟ್ಟರಿಗರು ಮರುಹಂಚಿಕೆ ಮಾಡಿ ಪ್ರತಿಕ್ರಿಯಿಸಿದ್ದಾರೆ.
ನಿನ್ನೆ ಹಂಚಿಕೊಂಡ ಈ ಪೋಸ್ಟ್ ಅನ್ನು 1.6 ಮಿಲಿಯನ್ಗಿಂತಲೂ ಹೆಚ್ಚು ಜನ ನೋಡಿದ್ದಾರೆ. ಎಸಿ ಕೋಚ್ನಲ್ಲಿಯೂ ಕೆಲವೊಮ್ಮೆ ಇಂಥ ಪರಿಸ್ಥಿತಿ ಉಂಟಾಗುತ್ತದೆ ಎಂದು ಒಬ್ಬರು ಹೇಳಿದ್ದಾರೆ. ದೂರದ ರೈಲು ಪ್ರಯಾಣದಲ್ಲಿ ಎಲ್ಲಾ ಕೋಚ್ಗಳಲ್ಲೂ ಇಂಥ ಸನ್ನಿವೇಶಗಳು ಸಾಮಾನ್ಯ. ಆದರೆ ಎಸಿ ಕೋಚ್ಗಳು ಇದರಿಂದ ಹೊರತಾಗಿವೆ ಎಂದಿದ್ದಾರೆ ಮತ್ತೊಬ್ಬರು.
ನಾನು ಭುವನೇಶ್ವರಕ್ಕೆ ಪ್ರಯಾಣಿಸುವಾಗ ಪುರುಷೋತ್ತಮ್ ಎಕ್ಸ್ಪ್ರೆಸ್ನ್ಲಿ ಇಂಥದೇ ಅನುಭವಕ್ಕೆ ಒಳಗಾದೆ. ಅದೂ ಸ್ಲೀಪರ್ ಕೋಚ್ನಲ್ಲಿ ಬುಕ್ ಮಾಡಿದ ಮೇಲೂ… ಎಂದು ಇನ್ನೊಬ್ಬರು ಹೇಳಿದ್ದಾರೆ. ಅಯ್ಯೋ ಇದೆಲ್ಲ ನಮ್ಮೂರಿನ ರೈಲುಗಳಲ್ಲಿ ತೀರಾ ಸಾಮಾನ್ಯ ಬಿಡಿ. ಸದ್ಯ ಹೀಗಾದರೂ ತಲುಪಲು ಅವಕಾಶ ಇದೆಯಲ್ಲ ಇನ್ನೂ ನಮ್ಮ ರೈಲುಗಳಲ್ಲಿ! ಇಲ್ಲವಾದರೆ ಏನು ಗತಿ? ಎಂದು ಮತ್ತೊಬ್ಬರು ಹೇಳಿದ್ದಾರೆ.