ಭಾರಿ ನಿರೀಕ್ಷೆ ಸೃಷ್ಟಿ ಮಾಡಿದ್ದ ‘ಆದಿಪುರುಷ್’ ಸಿನಿಮಾವನ್ನು ಜನರು ಮೆಚ್ಚಿಕೊಂಡಿಲ್ಲ. ಮೊದಲೇ ಕ್ರಿಯೇಟ್ ಆಗಿದ್ದ ಹೈಪ್ನ ಕಾರಣಕ್ಕಾಗಿ ಮೂರು ದಿನಗಳ ಕಾಲ ಹೇಗೋ ಒಂದಷ್ಟು ಕಲೆಕ್ಷನ್ ಆಯಿತು. ಆದರೆ ನಿಜವಾದ ಪರೀಕ್ಷೆ ಎದುರಾಗಿದ್ದು ಸೋಮವಾರ. ಯಾವುದೇ ಸಿನಿಮಾ ಸೋಮವಾರದ ಪರೀಕ್ಷೆಯಲ್ಲಿ ಪಾಸ್ ಆದರೆ ನಂತರದ ದಿನಗಳ ಕಲೆಕ್ಷನ್ ಕೂಡ ಚನ್ನಾಗಿ ಆಗುತ್ತದೆ. ಆದರೆ ‘ಆದಿಪುರುಷ್’ ತಂಡಕ್ಕೆ ಸೋಮವಾರ (ಜೂನ್ 19) ನಿರೀಕ್ಷಿತ ಮಟ್ಟದಲ್ಲಿ ಗಳಿಕೆ ಆಗಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ ಇನ್ನಷ್ಟು ಕುಸಿಯುವ ಮುನ್ಸೂಚನೆ ಸಿಕ್ಕಿದೆ. ಪ್ರಭಾಸ್ ಅವರು ಈ ಸಿನಿಮಾದಿಂದ ಮುಖಭಂಗ ಎದುರಿಸುವಂತಾಗಿದೆ. ನಿರ್ದೇಶಕ ಓಂ ರಾವತ್ ಅವರನ್ನು ಪ್ರೇಕ್ಷಕರು ಟ್ರೋಲ್ ಮಾಡುತ್ತಿದ್ದಾರೆ.
ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಅವರು ‘ಆದಿಪುರುಷ್’ ಸಿನಿಮಾದ ಸೋಮವಾರದ ಗಳಿಕೆಯನ್ನು ‘ಪತನ’ ಎಂದು ಬಣ್ಣಿಸಿದ್ದಾರೆ. ಅವರು ಹೇಳಿರುವುದು ಹಿಂದಿ ವರ್ಷನ್ನ ಕಲೆಕ್ಷನ್ ಬಗ್ಗೆ ಮಾತ್ರ. ಮೂಲಗಳ ಪ್ರಕಾರ ಈ ಚಿತ್ರ ಸೋಮವಾರ ಕೇವಲ 20 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮೂಲಗಳ ಪ್ರಕಾರ ಮೂರು ದಿನಕ್ಕೆ ಈ ಸಿನಿಮಾದ ಎಲ್ಲ ಭಾಷೆಯ ವರ್ಷನ್ನಿಂದ ವಿಶ್ವಾದ್ಯಂತ 340 ಕೋಟಿ ರೂಪಾಯಿ ಗಳಿಕೆ ಆಗಿದೆ. ಆದರೆ ಸೋಮವಾರದ ಬಳಿಕ ಗಳಿಕೆಯಲ್ಲಿ ಗಣನೀಯ ಕುಸಿತ ಆಗುತ್ತಿದೆ.
ರಾಮಾಯಣವನ್ನು ಆಧರಿಸಿ ‘ಆದಿಪುರುಷ್’ ಸಿನಿಮಾ ಸಿದ್ಧವಾಗಿದೆ. ಆದರೆ ಈ ಸಿನಿಮಾ ಮೂಡಿಬಂದಿರುವ ಶೈಲಿಗೆ ಜನರಿಂದ ವಿರೋಧ ವ್ಯಕ್ತವಾಗುತ್ತಿದೆ. ಮೊದಲ ದಿನವೇ ಸಾಕಷ್ಟು ಟ್ರೋಲ್ಗಳು ಶುರುವಾದವು. ಮೂರು ದಿನ ಕಳೆದರೂ ಚಿತ್ರದ ಬಗೆಗಿನ ನೆಗೆಟಿವ್ ವಿಮರ್ಶೆ ನಿಂತಿಲ್ಲ. ಪ್ರತಿಯೊಂದು ವಿಚಾರವನ್ನೂ ಇಟ್ಟುಕೊಂಡು ಜನರು ಟೀಕೆ ಮಾಡುತ್ತಿದ್ದಾರೆ. ಇದನ್ನೆಲ್ಲ ಕೇಳಿ ಅನೇಕರು ಈ ಮೊದಲೇ ಬುಕ್ ಮಾಡಿದ್ದ ಟಿಕೆಟ್ಗಳನ್ನು ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಈ ಎಲ್ಲ ಘಟನೆಗಳು ‘ಆದಿಪುರುಷ್’ ಚಿತ್ರದ ಹಿನ್ನಡೆಗೆ ಕಾರಣ ಆಗಿವೆ.
ಈ ಸಿನಿಮಾದಲ್ಲಿ ಪ್ರಭಾಸ್ ಅವರು ರಾಮನಾಗಿ ನಟಿಸಿದ್ದಾರೆ. ಸೈಫ್ ಅಲಿ ಖಾನ್ ಅವರಿಗೆ ರಾವಣನ ಪಾತ್ರ ನೀಡಲಾಗಿದೆ. ದೇವದತ್ತ ನಾಗೆ ಅವರು ಆಂಜನೇಯನ ಪಾತ್ರ ಮಾಡಿದ್ದಾರೆ. ಸೀತೆಯಾಗಿ ಕೃತಿ ಸನೋನ್ ಅಭಿನಯಿಸಿದ್ದಾರೆ. ಸನ್ನಿ ಸಿಂಗ್ ಅವರು ಲಕ್ಷ್ಮಣನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ವಿಭೀಷಣನ ಪತ್ನಿಯ ಪಾತ್ರವನ್ನು ಮರಾಠಿ ನಟಿ ತೃಪ್ತಿ ತೋರಡ್ಮಲ್ ಮಾಡಿದ್ದಾರೆ. ಅವರು ಒಂದು ದೃಶ್ಯದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವುದಕ್ಕೂ ಟೀಕೆ ವ್ಯಕ್ತವಾಗುತ್ತಿದೆ.