ಸ್ಪೈಡರ್ ಮ್ಯಾನ್ ವೇಷ ಧರಿಸಿ ಅಮೆರಿಕದ ಪಾರ್ಕ್ನಲ್ಲಿ ಓಡಾಡಿಕೊಂಡಿದ್ದ 15 ವರ್ಷದ ಹುಡುಗನ ಮೇಲೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿದೆ. ಈ ಗುಂಪಿನ ಹುಡುಗಿಯೊಬ್ಬಳು ವೇಷಧಾರಿ ಸ್ಪೈಡರ್ಮ್ಯಾನ್ನ ಮೂಗಿಗೆ ಬಲವಾಗಿ ಗುದ್ದಿದ ಪರಿಣಾಮ ಆತನ ಮೂಗು ಮುರಿದಿದೆ. ಹಲ್ಲೆಗೊಳಗಾದ ಈತನ ಹೆಸರು ಐಡಿನ್ ಪೆಡೋನ್. ಇವನು ಅಮೆರಿಕದ ಹಡ್ಸನ್ ಫಾಲ್ಸ್‌ನ ಶಾಲಾ ವಿದ್ಯಾರ್ಥಿಯಾಗಿದ್ಧಾನೆ ಎಂದು ಎಂದು ದಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಒಂದಿಬ್ಬರು ಓರಗೆಯ ಹುಡುಗರು ಈ ವೇಷಧಾರಿಯ ಬಳಿ ಬಂದು ಏನನ್ನೋ ಕೇಳುತ್ತಾರೆ. ಆ ನಂತರ ಅಲ್ಲಿಗೆ ಬಂದ ಇದೇ ಗುಂಪಿನ ಹುಡುಗಿಯು ಮೊದಲು ಅವನ ಮುಖಕ್ಕೆ ಹೊಡೆಯುತ್ತಾಳೆ. ಆಗ ಆ ಹೊಡೆತದಿಂದ ಐಡಿನ್ ತಪ್ಪಿಸಿಕೊಳ್ಳುತ್ತಾನೆ. ಆಗ ಆಕೆ ಮತ್ತೆ ಬಲವಾಗಿ ಅವನ ಮೂಗಿಗೆ ನೇರ ಗುದ್ದುತ್ತಾಳೆ. ನೋವಿನಿಂದ ಆತ ಒದ್ಧಾಡುತ್ತ ಮುಖಕ್ಕೆ ಹಾಕಿದ ಮಾಸ್ಕ್ ಅನ್ನು ತೆಗೆಯುತ್ತಾನೆ. ಮೂಗು ಮುರಿದು ರಕ್ತ ಬಳಬಳನೆ ಸೋರುತ್ತಿರುತ್ತದೆ.
ಹದಿಹರೆಯದ ಗುಂಪೊಂದು ಮೋಜಿಗಾಗಿ ನನ್ನ ಮಗನನ್ನು ಈ ಅವಸ್ಥೆಗೆ ತಂದಿದೆ ಎಂದು ಐಡಿನ್ನ ತಾಯಿ ಶೆಲ್ಲೀ ಪೆಡೋನ್ ಫೇಸ್ಬುಕ್ನಲ್ಲಿ ಈ ಘಟನೆಯ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕಕ್ಕೆ ಒಳಗಾಗಿದ್ದಾರೆ. ”ಪೋಷಕರು ತಮ್ಮ ಮಕ್ಕಳ ವರ್ತನೆಯನ್ನು ಗಮನಿಸುತ್ತಿದ್ದಾರೆಯೇ? ಅವರನ್ನು ಪ್ರಭಾವಿಸುತ್ತಿರುವ ಮನೋರಂಜನೆಯ ಅಂಶಗಳು ಏನು ಎನ್ನುವುದನ್ನು ತಿಳಿದಿದ್ದಾರೆಯೇ? ವಿಶೇಷವಾಗಿ ಹೈಸ್ಕೂಲಿಗೆ ಹೋಗುವ ಮಕ್ಕಳ ಬಗ್ಗೆ ಪೋಷಕರು ಹೆಚ್ಚಾಗಿ ನಿಗಾ ವಹಿಸಬೇಕು” ಎಂದು ನೆಟ್ಟಿಗರು ಕಾಳಜಿಯಿಂದ ವಿನಂತಿಸಿಕೊಂಡಿದ್ಧಾರೆ.