ಅಂಕೋಲಾ: ಬಾರ್ಡೋಲಿ ಗೌರವ ಪ್ರಶಸ್ತಿಗೆ ಶಿರಸಿಯ ಪತ್ರಕರ್ತ ಪ್ರದೀಪ ಶೆಟ್ಟಿ ಆಯ್ಕೆ


ಅಂಕೋಲಾ : ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಿಕಾ ದಿನಾಚರಣೆಯ ಪ್ರಯುಕ್ತ ನೀಡುವ ಬಾರ್ಡೋಲಿ ಗೌರವ ಪ್ರಶಸ್ತಿಗೆ ಶಿರಸಿಯ ಹಿರಿಯ ಪತ್ರಕರ್ತ ಪ್ರದೀಪ ಶೆಟ್ಟಿಯವರನ್ನು ಆಯ್ಕೆ ಮಾಡಲಾಗಿದೆ.
ತಾಲೂಕಿನ ಖಾಸಗಿ ಹೊಟೇಲನಲ್ಲಿ ನಡೆದ ಸಂಘದ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಂಡಿದ್ದು, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘವು ಪ್ರತಿವರ್ಷ ಪತ್ರಿಕಾ ದಿನಾಚರಣೆ ಪ್ರಯುಕ್ತ ಬಾರ್ಡೋಲಿ ಗೌರವ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು ಸದ್ಯದಲ್ಲೆ ಜರುಗುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರದೀಪ ಶೆಟ್ಟಿ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವದು ಎಂದು ತಿಳಿಸಿದ್ದಾರೆ.
ಪ್ರದೀಪ ಶೆಟ್ಟಿಯವರು ಕಳೆದ 25 ವರ್ಷಗಳಿಂದ ಪತ್ರಿಕಾ ರಂಗದಲ್ಲಿ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 1998 ರಿಂದ ಜನಮಾದ್ಯಮ ಪತ್ರಿಕೆಯ ವರದಿಗಾರರಾಗಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು ನಂತರ ವಿಜಯ ಕರ್ನಾಟಕ, ಕರಾವಳಿ ಸುಪ್ರಭಾತ, ಮುಂತಾದ ಪತ್ರಿಕೆಗಳಿಗೆ ವರದಿಗಾರರಾಗಿದ್ದು ಈಗ ಸುಮಾರು 20 ವರ್ಷಗಳಿಂದ ಕನ್ನಡ ಜನಾಂತರಂಗದ ಶಿರಸಿ ವಿಭಾಗದ ಹಿರಿಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸದಸ್ಯನಾಗಿ, ಮೂರು ಸಲ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು ಅನೇಕ ಪ್ರಶಸ್ತಿ ಪುರಸ್ಕಾರಗಳನ್ನೂ ಪಡೆದಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಕಾರ್ಯದರ್ಶಿ ವಿದ್ಯಾಧರ ಮೊರಬಾ, ಗೌರವಾಧ್ಯಕ್ಷ ರಾಘು ಕಾಕರಮಠ, ಉಪಾದ್ಯಕ್ಷ ನಾಗರಾಜ ಮಂಜುಗುಣಿ , ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ರಮೇಶ, ಸದಸ್ಯರಾದ ಅಕ್ಷಯ ನಾಯ್ಕ, ನಾಗರಾಜ ಜಾಂಬಳೇಕರ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.