ಭಟ್ಕಳದಲ್ಲಿ ಭಾರಿ ಮಳೆ:  ಅಸ್ತವ್ಯಸ್ತಗೊಂಡ ಜನಜೀವನ:  ನದಿಯಂತಾದ ರಸ್ತೆ

ಭಟ್ಕಳ: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಸತತ ಮೂರ್ನಾಲ್ಕು ದಿನಗಳ ತನಕ ಭಾರಿ ಮಳೆಯ ಸೂಚನೆಯಂತೆ ಕರಾವಳಿ ಭಾಗದಲ್ಲಿ ಅಬ್ಬರದ ಮಳೆ ಆರಂಭಗೊಂಡಿದ್ದು
ಭಟ್ಕಳದಲ್ಲಿಯು ಸಹ ಭಾರಿ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡು ರಸ್ತೆ ಎಲ್ಲೆಡೆ ನೀರು ಹರಿದು ವಾಹನ ಸಂಚಾರರಿಗೆ ತೀವ್ರ ತೊಂದರೆ ಉಂಟಾಗಿದ್ದು,ಮಂಗಳವಾರದಂದು ಒಂದೇ ದಿನ ದಾಖಲೆಯ ಮಳೆಯ ಜೊತೆಗೆ ಜನರಿಗೆ ಕಿರಿಕಿರಿಯನ್ನುಂಟು ಮಾಡಿತು.‌

ಭಾರಿ ಮಳೆಯಿಂದಾಗಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮಳೆಯಿಂದಾಗಿ ಜನ ಮನೆಗಳಿಂದ ಹೊರಗೆ ಬರದಂತಾಗಿತ್ತು. ತಾಲೂಕಿನಲ್ಲಿ ಮಂಗಳವಾರದಂದು ಮುಂಜಾನೆಯಿಂದಲೇ ಎಡೆ ಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನರ‌‌ ಓಡಾಟಕ್ಕೆ ಕಡಿವಾಣ ಬಿದ್ದಂತಾಗಿದೆ.
ಕೆಲಕಾಲ ಮಳೆ ಕಡಿಮೆಯಾಗಿತೆನ್ನುವಷ್ಟರಲ್ಲಿ ಮತ್ತೆ ತನ್ನ ಆರ್ಭಟ ಶುರುವಿಟ್ಟುಕೊಳ್ಳುತ್ತಾ ದಿನವಿಡಿ ಜನರ ಓಡಾಟಕ್ಕೆ ಮಳೆ ಕಡಿವಾಣ ಹಾಕಿರುವುದು ಕಂಡು ಬಂತು.

ಇನ್ನು ಈ ಭಾರಿ ಮಳೆಗೆ ಜನ ಜೀವನ ಸಹ ಅಸ್ತವ್ಯಸ್ತಗೊಂಡಿದ್ದು ಪ್ರಮುಖ ರಸ್ತೆಗಳಲ್ಲಿ ನೀರಿನಿಂದಾವೃತಗೊಂಡಿದ್ದವು. ಇಲ್ಲಿನ ಪಟ್ಟಣದ ಮುಖ್ಯ ಪೇಟೆ ರಸ್ತೆಗಳೆಲ್ಲವು ನೀರಿನಿಂದಾವ್ರತವಾಗಿದ್ದವು. ರಸ್ತೆಯ ತುಂಬೆಲ್ಲ ನೀರು ನಿಂತಿದ್ದು ವಾಹನ ಸಂಚಾರಕ್ಕೆ ತೊಡಕಾಗಿತ್ತು.

ಇಲ್ಲಿನ ಸಂಶುದ್ದೀನ್ ಸರ್ಕಲ್ ಪ್ರತಿ ವರ್ಷ ಸುರಿಯವ ಭಾರಿ ಮಳೆಗೆ ಹರಕೆಯಂತೆ ಚರಂಡಿ ವ್ಯವಸ್ಥೆ ಸರಿಯಿಲ್ಲದ ಕಾರಣ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು ಇದರಿಂದಾಗಿ ವಾಹನ ಸವಾರರಿಗೆ ತೊಂದರೆ ಉಂಟಾಗಿದೆ. ಪ್ರತಿ ವರ್ಷದ ಈ ಅವ್ಯವಸ್ಥೆಗೆ ಪುರಸಭೆ ಮಾತ್ರ ಎಚ್ಚೆತ್ತುಕೊಳ್ಳದೇ ರಸ್ತೆಯ ತುಂಬೆಲ್ಲ ನೀರು ನಿಲ್ಲುವಂತಾಗಿದೆ. ಇನ್ನು ರಂಗಿನಕಟ್ಟೆಯಲ್ಲಿ ಅಡಿಗಳಷ್ಟು ನೀರು ರಸ್ತೆಯ ತುಂಬೆಲ್ಲ ನಿಂತ ಹಿನ್ನೆಲೆ ಕೆಲ‌ಕಾಲ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿ ವಾಹನಗಳು ಸರದಿ ಸಾಲಿನಲ್ಲಿ ನಿಂತು ನಿಧಾನವಾಗಿ ವಾಹನ ಚಲಾಯಿಸಿಕೊಂಡು ಹೋಗುತ್ತಿರುವ ದ್ರಶ್ಯ ಕಂಡು ಬಂತು. ಭಾರಿ ಗಾತ್ರದ ವಾಹನಕ್ಕಿಂತ ದ್ವಿಚಕ್ರ ವಾಹನ, ಆಟೋ ರಿಕ್ಷಾ ಹಾಗೂ ಕಾರುಗಳ ಓಡಾಟಕ್ಕೆ ಭಾರಿ ತೊಂದರೆ ಉಂಟಾಯಿತು.

ಇನ್ನು ರಘುನಾಥ ದೇವಸ್ಥಾನದ ಹತ್ತಿರ ಯುಜಿಡಿ ಅವೈಜ್ಞಾನಿಕ ಕಾಮಗಾರಿಯಿಂದ ದೊಡ್ಡಗಾತ್ರದ ಹೊಂಡಗಳು ಬಿದ್ದಿದ್ದು ಇದರಿಂದ ಸಾರ್ವಜನಿಕರ ವಾಹನಗಳಿಗೆ ತೀರಾ ತೊಂದರೆ ಅನುಭವಿಸಿದರು. ನಂತರ ಸ್ಥಳೀಯರೇ ಹೊಂಡ ಬಿದ್ದ ಸಾಗದಲ್ಲಿ ಬ್ಯಾರಿಗೇಟ್ ಹಾಕಿ ಸಂಚಾರಕ್ಕೆ ಅನೂಕೂಲ ಮಾಡಿಕೊಂಡರು.

ಇನ್ನು ಅಂಗಡಿ ವ್ಯಾಪಾರಸ್ಥರಿಗೂ, ಹೊಟೇಲ್ ಮಾಲೀಕರಿಗು ಸಹ  ದಿನವಿಡಿ ಸುರಿದ ಮಳೆ ವ್ಯಾಪಾರಕ್ಕೆ ಅಡ್ಡಿಯುಂಟು ಮಾಡಿದ್ದು, ಬೀದಿ ಬದಿ ವ್ಯಾಪಾರಿಗಳು ಮಳೆಯಲ್ಲಿಯೇ ವ್ಯಾಪಾರಕ್ಕೆ ಇಳಿದಿರುವುದು ಕಂಡು ಬಂತು.

ಒಟ್ಟಾರೆ ದಿನವಿಡಿ ಸುರಿದ ಭಾರಿ ಮಳೆಯು ಬೇಸಿಗೆಯ ತಾಪವನ್ನೇ ಮರೆಸುವಂತಾಗಿರುದಂತು ಸತ್ಯ.