ಪ್ರಾಣಿ ಹಕ್ಕುಗಳ ಕಾರ್ಯಕರ್ತರುಗಳು ಇದ್ದಕ್ಕಿದ್ದ ಹಾಗೆ ಈ ನಿರಾಶ್ರಿತನಿದ್ದಲ್ಲಿ ಬಂದು ಇವನ ನಾಯಿಮರಿಯನ್ನು ಎತ್ತಿಕೊಂಡು ಹೋಗುತ್ತಿದ್ದಾರೆ. ಒಬ್ಬ ನಿರಾಶ್ರಿತನನ್ನು ಗಟ್ಟಿಯಾಗಿ ಹಿಡಿಯಲು ಪ್ರಯತ್ನಿಸುತ್ತಿದ್ದಾನೆ. ಇನ್ನೊಬ್ಬಾಕೆ ನಾಯಿಮರಿಯನ್ನು ಎತ್ತಿಕೊಂಡು ಓಡಲು ನೋಡುತ್ತಿದ್ದಾಳೆ. ಇವರಿಬ್ಬರಿಂದ ತನ್ನ ನಾಯಿಮರಿಯನ್ನು ಬಿಡಿಸಿಕೊಳ್ಳಲು ವಯಸ್ಸಾದ ಈ ನಿರಾಶ್ರಿತ ಹೆಣಗಾಡುತ್ತಿದ್ದಾನೆ. ಈ ದೃಶ್ಯವನ್ನು ನೋಡಿದ ಜಾಲತಾಣಿಗರು, ಇದೆಂಥ ಅಮಾನವಿಯ ಎಂದು ಬೇಸರ ಪಟ್ಟುಕೊಳ್ಳುತ್ತಿದ್ದಾರೆ, ಜೊತೆಗೆ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಂದೇನಾಯಿತು ಎಂದು ತಿಳಿದುಕೊಳ್ಳುವ ಮೊದಲು ಈ ಕೆಳಗಿನ ವಿಡಿಯೋ ನೋಡಿ.
ಇವರಿಬ್ಬರೂ ಮನುಷ್ಯರೇ? ನಾಯಿಗಳಿಗಿಂತ ಕಡೆಯಾಗಿ ವರ್ತಿಸುತ್ತಿದ್ದಾರಲ್ಲ. ನಾಯಿ ಮತ್ತು ಆ ಮನುಷ್ಯನನ್ನು ಇಷ್ಟೊಂದು ಗೋಳಾಡಿಸಿ, ಭಯಪಡಿಸಿ ಇವರು ಸಾಧಿಸುವುದಾದರೂ ಏನು? ಇಂಥ ಕೆಟ್ಟ ವಿಡಿಯೋ ಅನ್ನು ಈತನಕ ನಾನು ನೋಡಿರಲೇ ಇಲ್ಲ, ಎಂಥಾ ದುಃಖವನ್ನು ತರುತ್ತಿದೆ ಈ ವಿಡಿಯೋ. ನಾಯಿಪ್ರೇಮಿಯಾದ ನನಗೆ ಇದು ಅತೀವ ಸಂಕಟವನ್ನುಂಟು ಮಾಡುತ್ತಿದೆ… ಅಂತೆಲ್ಲ ಪ್ರತಿಕ್ರಿಯಿಸಿದ್ದಾರೆ ಜನ. ಆದರೆ ಇದೇ ಟ್ವೀಟಿನ ಥ್ರೆಡ್ನಲ್ಲಿ, ಆ ನಿರಾಶ್ರಿತ ತನ್ನ ನಾಯಿಯನ್ನು ಮರಳಿ ಪಡೆದ ವಿವರ ಮತ್ತು ಫೋಟೋ ಲಗತ್ತಿಸಲಾಗಿದೆ.
ಸದ್ಯ! ದೇವರು ದಯಾಮಯಿ, ನಿರಾಶ್ರಿತನನ್ನು ಮತ್ತು ನಾಯಿಮರಿಯನ್ನು ಒಂದುಮಾಡಿದ್ದಾನೆ. ಎರಡೂ ಮುಗ್ಧ ಜೀವಗಳು, ಹೀಗೆಲ್ಲ ಹಿಂಸಿಸಬಾರದಿತ್ತು. ಇಂಥ ಕೃತ್ಯದಲ್ಲಿ ಭಾಗಿಯಾದ ಆ ಇಬ್ಬರಿಗೂ ಜೈಲುಶಿಕ್ಷೆಯಾಗಬೇಕು. ನಿರಾಶ್ರಿತನಿಗೆ ಮತ್ತು ನಾಯಿಮರಿಗೆ ಊಟ ವಸತಿಯ ಸೌಲಭ್ಯ ದಕ್ಕುವಂತಾಗಬೇಕು. ನಾಚಿಕೆಯಾಗಬೇಕು ಇಷ್ಟೊಂದು ಹೃದಯಹೀನರಾಗಿ ನಡೆದುಕೊಳ್ಳಲು. ಅವರೇನು ರಕ್ಷಕರೋ ಭಕ್ಷಕರೋ… ಅಂತೆಲ್ಲ ಪ್ರತಿಕ್ರಿಯಿಸಿದೆ ನೆಟ್ಮಂದಿ.
ಒಟ್ಟಾರೆಯಾಗಿ ಈ ವಿಡಿಯೋ ಕಣ್ಣಿನಿಂದ ಮನಸ್ಸಿನಿಂದ ಅಷ್ಟೊಂದು ಸುಲಭವಾಗಿ ಸರಿಯದು ಎನ್ನಿಸುವಂತಿದೆ. ವಯಸ್ಸಾದ ಆತ ಬೀದಿನಾಯಿಯೊಂದಿಗೆ ಕಷ್ಟವೋ ಸುಖವೋ ಎಂದು ಬದುಕುತ್ತಿರುವಾಗ ‘ಮಾನವೀಯತೆ ಮತ್ತು ಹಕ್ಕುಗಳು’ ಎಂಬ ಕಾರಣ ಕೊಟ್ಟು ಹೀಗೆಲ್ಲ ವರ್ತಿಸುವುದು ಎಷ್ಟು ಸರಿ?