ಸಿಡ್ನಿಯಲ್ಲಿ ಖಲಿಸ್ತಾನಿ ಬೆಂಬಲಿಗರಿಂದ ಭಾರತೀಯ ವಿದ್ಯಾರ್ಥಿಗೆ ರಾಡ್​ನಿಂದ ಥಳಿತ

ಸಿಡ್ನಿ, ಜುಲೈ 14: ಆಸ್ಟ್ರೇಲಿಯಾದಲ್ಲಿ ಖಲಿಸ್ತಾನಿ ಬೆಂಬಲಿಗರ ಅಟ್ಟಹಾಸ ಹೆಚ್ಚಾಗಿದೆ. ಭಾರತೀಯ ವಿದ್ಯಾರ್ಥಿಯೊಬ್ಬನನ್ನು ರಾಡ್​ನಿಂದ ಥಳಿಸಿರುವ ವಿಚಾರ ಬೆಳಕಿಗೆ ಬಂದಿದೆ. ಸಿಡ್ನಿಯ ಮೆರ್ರಿಲ್ಯಾಂಡ್ಸ್​ನಲ್ಲಿ ಮನೆಯಿಂದ ಕೆಲಸಕ್ಕೆ ಹೋಗುತ್ತಿರುವಾಗ ಖಲಿಸ್ತಾನಿ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ.

ಶುಕ್ರವಾರ ಬೆಳಗ್ಗೆ 5.30ರ ವೇಳೆಗೆ ಕೆಲಸಕ್ಕೆ ಹೋಗುತ್ತಿರುವಾಗ 4-5 ಖಲಿಸ್ತಾನಿ ಬೆಂಬಲಿಗರು ದಾಳಿ ನಡೆಸಿದ್ದಾರೆ ಎಂದು ಆಸ್ಟ್ರೇಲಿಯನ್ ಟುಡೇ ವರದಿ ಮಾಡಿದೆ. ಕಬ್ಬಿಣದ ರಾಡ್​ನಿಂದ ಹಲ್ಲೆ ನಡೆಸಿದ್ದಷ್ಟೇ ಅಲ್ಲದೆ ಅದನ್ನು ಇಬ್ಬರು ಚಿತ್ರೀಕರಣ ಕೂಡ ಮಾಡಿದ್ದಾರೆ.

ಮನೆಯಿಂದ 50 ಮೀಟರ್ ದೂರದಲ್ಲಿ ಕಾರು ನಿಲ್ಲಿಸಿದ್ದ ವಿದ್ಯಾರ್ಥಿ, ಕಾರಿನಲ್ಲಿ ಹೋಗಿ ಕೂರುತ್ತಿದ್ದಂತೆ ಇದ್ದಕ್ಕಿದ್ದಂತೆ ಖಲಿಸ್ತಾನಿ ಬೆಂಬಲಿಗರು ಕಾಣಿಸಿಕೊಂಡಿದ್ದಾರೆ. ಅವರಲ್ಲಿ ಒಬ್ಬರು ಕಾರಿನ ಬಾಗಿಲನ್ನು ತೆರೆದು ಮುಖಕ್ಕೆ ರಾಡ್​ನಿಂದ ಹೊಡೆದಿದ್ದರು.

ನಂತರ ಕಾರಿನಿಂದ ಹೊರಗೆಳೆದು ಕಬ್ಬಿಣದ ರಾಡ್​ನಿಂದ ಥಳಿಸಿದ್ದಾರೆ ಎಂದು ವಿದ್ಯಾರ್ಥಿ ಹೇಳಿದ್ದಾನೆ. ಈ ಘಟನೆಯನ್ನು ನೋಡಿ ಕೆಲವರು ದಾರಿಹೋಕರು ಪೊಲೀಸರಿಗೆ ಕರೆ ಮಾಡಿದ್ದಾರೆ, ಘಟನಾ ಸ್ಥಳಕ್ಕೆ ಪೊಲೀಸರು ವೈದ್ಯರನ್ನು ಕರೆತಂದರು.

ತಲೆ, ಕೈಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ವಿದ್ಯಾರ್ಥಿಯನ್ನು ವೆಸ್ಟ್​ಮೀಡ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕೆನಡಾದಲ್ಲಿ ನಿರಂತರ ದಾಂಧಲೆ ಎಬ್ಬಿಸುತ್ತಿದ್ದ ಖಲಿಸ್ತಾನಿ ಬೆಂಬಲಿಗರಿಗೆ ಭಾರತೀಯ ಸಮುದಾಯ ಸರಿಯಾದ ಪಾಠ ಕಲಿಸಿತ್ತು.

ಟೊರಂಟೋದಲ್ಲಿ ಭಾರತದ ವಿರುದ್ಧ ಘೋಷಣೆ ಕೂಗುತ್ತಾ ಖಲಿಸ್ತಾನಿ ಧ್ವಜವನ್ನು ಹಿಡಿದುಕೊಂಡು ಗಲಾಟೆ ಮಾಡಿದ್ದರು, ಅದಕ್ಕೆ ಪ್ರತಿಯಾಗಿ ಭಾರತೀಯರು ಭಾರತದ ಧ್ವಜವನ್ನು ಪ್ರದರ್ಶಿಸಿ, ಜೈ ಕಾರ ಹಾಕುವ ಮೂಲಕ ತಕ್ಕ ಉತ್ತರ ನೀಡಿದ್ದರು.