ಜೋಯಿಡಾ : ತಾಲ್ಲೂಕಿನ ಸೂಪಾ ಹೋಬಳಿಯ ಕಂದಾಯ ನಿರೀಕ್ಷಕರಾಗಿ ಕಳೆದೆರಡು ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಇದೀಗ ಸಿದ್ದಾಪುರ ತಾಲ್ಲೂಕಿಗೆ ವರ್ಗಾವಣೆಗೊಂಡ ಕಂದಾಯ ನಿರೀಕ್ಷಕರಾದ ಶ್ಯಾಮಸುಂದರ್ ಅವರಿಗೆ ಜೋಯಿಡಾ ತಹಶೀಲ್ದಾರ್ ಕಾರ್ಯಾಲಯದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ವರ್ಗಾವಣೆಗೊಂಡ ಶ್ಯಾಮಸುಂದರ್ ಅವರನ್ನು ಸನ್ಮಾನಿಸಿ ಮಾತನಾಡಿದ ತಹಶೀಲ್ದಾರ್ ಬಸವರಾಜ್ ತೆನ್ನಳ್ಳಿಯವರು ಶ್ಯಾಮಸುಂದರ್ ಅವರು ಸದಾ ಕ್ರೀಯಶೀಲರಾಗಿ ಕರ್ತವ್ಯ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೆಲಸದಲ್ಲಿರುವ ಅವರ ಬದ್ಧತೆ, ಶಿಸ್ತು ಅನುಕರಣೀಯ ಮತ್ತು ಅಭಿನಂದನೀಯ ಎಂದು ಶುಭವನ್ನು ಹಾರೈಸಿದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಶ್ಯಾಮಸುಂದರ್ ಅವರು ಪ್ರಕೃತಿಯ ಮಡಿಲಾದ ಜೋಯಿಡಾ ತಾಲ್ಲೂಕಿನಲ್ಲಿ ಕೆಲಸ ನಿರ್ವಹಿಸಲು ಅವಕಾಶ ದೊರೆತಿರುವುದು ನನ್ನ ಭಾಗ್ಯ. ಮೇಲಾಧಿಕಾರಿಗಳ ಸಕಾಲಿಕ ಮಾರ್ಗದರ್ಶನ, ಸಹದ್ಯೋಗಿಗಳ ಸ್ಪಂದನೆ, ಸಿಬ್ಬಂದಿಗಳ ಸಹಕಾರ ಮತ್ತು ತಾಲ್ಲೂಕಿನ ಜನತೆ ನೀಡಿದ ವಾತ್ಸಲ್ಯ ಸದಾ ಸ್ಮರಣೀಯ. ನಮಗೆ ವಹಿಸಿದ ಜವಾಬ್ದಾರಿಗಳನ್ನು ಶ್ರದ್ಧೆಯಿಂದ ಮಾಡಿದಾಗ ನಿಜವಾದ ಆತ್ಮತೃಪ್ತಿಯನ್ನು ಪಡೆಯಲು ಸಾಧ್ಯ ಎಂದು ಎಲ್ಲರಿಗೂ ಕೃತಜ್ಷತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶ್ಯಾಮಸುಂದರ್ ಅವರ ಪ್ರಾಮಾಣಿಕತೆ ಮತ್ತು ಕರ್ತವ್ಯಬದ್ಧತೆಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಉಪ ತಹಶೀಲ್ದಾರರುಗಳಾದ ಸಂಜೀವ್ ಭಜಂತ್ರಿ, ಸುರೇಶ್ ಒಕ್ಕುಂದ, ಕುಂಬಾರವಾಡ ಹೋಬಳಿಯ ಕಂದಾಯ ನಿರೀಕ್ಷಕರಾದ ಗಣಪತಿ ಮೇತ್ರಿ, ತಹಶೀಲ್ದಾರ್ ಕಾರ್ಯಾಲಯದ ಪ್ರದೀಪ್ ಬಾಗಲಕೋಟೆ, ಮಲ್ಲಪ್ಪ ಗಚ್ಚಿನಮನಿ, ಮಂಜು ಲಮಾಣಿ, ದೇವೇಂದ್ರ ಭಜಂತ್ರಿ, ವಿಶ್ವಜಿತ್ ರಾಣೆ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.