ಹಳಿಯಾಳ : ತಾಲ್ಲೂಕಿನ ಹವಗಿಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡದ ಮಹತ್ವ ಮತ್ತು ವ್ಯಕ್ತಿತ್ವ ವಿಕಸನದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕಾರರಾಗಿ ಭಾಗವಹಿಸಿ ಮಾತನಾಡಿದ ಬಾಗಲಕೋಟೆ ಜಿಲ್ಲೆಯ ಸಹಕಾರ ಯೂನಿಯನಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಶೈಲ ಯಡಹಳ್ಳಿ ಅವರು ಕನ್ನಡ ಭಾಷೆ ಒಂದು ಶಕ್ತಿ. ಕನ್ನಡ ಭಾಷೆಯಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರ ಅಡಗಿದೆ. ನಮ್ಮ ದೇಶದಲ್ಲಿ ಕನ್ನಡಕ್ಕೆ ಅದರದ್ದೇ ಆದ ಸ್ಥಾನಮಾನವಿದೆ. ಹಾಗಾಗಿ ಇಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಕನ್ನಡ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡದಲ್ಲೆ ಪರೀಕ್ಷೆ ಬರೆಯಲು ಅವಕಾಶವಿದ್ದು, ಕನ್ನಡವನ್ನೆ ಕೇಂದ್ರಿಕರಿಸಿಕೊಂಡು ಸಾಕಷ್ಟು ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತದೆ. ಈ ನಿಟ್ಟಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಪದವಿ ಶಿಕ್ಷಣದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗಿಯಾಗಬೇಕು. ಸತತವಾದ ಅಧ್ಯಯನ ಮತ್ತು ಪರಿಶ್ರಮವಿದ್ದಲ್ಲಿ ಸಾಧನೆ ಸಾಧ್ಯವಿದ್ದು, ಅಂತಹ ಸಾಧನೆಗೆ ಕನ್ನಡ ಉಪಯುಕ್ತವಾದ ಮಾರ್ಗವಾಗಿದೆ ಎಂದರು. ಶಿಕ್ಷಣ ಕಲಿತರಷ್ಟೆ ಸಾಲದು, ಶಿಕ್ಷಣದ ಜೊತೆಗೆ ಸುಸಂಸ್ಕೃತವಾದ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಾಗ ನಾವು ಕಲಿತ ಶಿಕ್ಷಣಕ್ಕೆ ಬೆಲೆ ಬರಲು ಸಾಧ್ಯವಿದೆ. ನಾವು ನಮ್ಮ ಜೀವನದಲ್ಲಿ ಆದರ್ಶ ನಡವಳಿಕೆಗಳೊಂದಿಗೆ ಮುಂದೆ ಸಾಗಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯರು, ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.