ದೆಹಲಿ ಜುಲೈ 15: ಉಕ್ಕಿ ಹರಿಯುತ್ತಿರುವ ಯಮುನಾ ನದಿಯ ಪ್ರವಾಹದಿಂದಾಗಿ ನೋಯ್ಡಾದಲ್ಲಿ ಸಿಲುಕಿರುವ ಪ್ರಾಣಿಗಳನ್ನು ವಿಪತ್ತು ನಿರ್ವಹಣಾ ತಂಡಗಳು ರಕ್ಷಿಸಿವೆ. ಹೀಗೆ ರಕ್ಷಿಸಿದ ಪ್ರಾಣಿಗಳ ಪೈಕಿ ಪ್ರೀತಂ ಎಂಬ ಗೂಳಿಯೂ ಒಂದು. ಇದರ ಬೆಲೆ ಬರೋಬ್ಬರಿ 1 ಕೋಟಿ!. ಗಾಜಿಯಾಬಾದ್‌ನಲ್ಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 8 ನೇ ಬೆಟಾಲಿಯನ್, ನಮ್ಮ ತಂಡ ನೋಯ್ಡಾದಿಂದ ಭಾರತದ ನಂ.1 ಗೂಳಿ, 1 ಕೋಟಿ ರೂಪಾಯಿ ಬೆಲೆಬಾಳುವ “ಪ್ರೀತಮ್” ಸೇರಿದಂತೆ 3 ಜಾನುವಾರುಗಳನ್ನು ರಕ್ಷಿಸಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜೀವ ಉಳಿಸಲು ನಮ್ಮ ತಂಡಗಳು ಶ್ರಮಿಸುತ್ತಿವೆ ಎಂದು ರಕ್ಷಣಾ ತಂಡ ಜಾನುವಾರು ಮತ್ತು ಮೇಕೆಗಳನ್ನು ರಕ್ಷಿಸುವ ಫೋಟೋಗಳು ಮತ್ತು ವಿಡಿಯೊಗಳನ್ನು ಟ್ವೀಟ್ ಮಾಡಿದೆ.
ಯಮುನಾ ನದಿಯ ನೀರು ನೋಯ್ಡಾದಲ್ಲಿ ನದಿಯ ದಡದಲ್ಲಿ ಸುಮಾರು 550 ಹೆಕ್ಟೇರ್ ಭೂಮಿಯನ್ನು ಮುಳುಗಿಸಿದೆ. 5,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ ಮತ್ತು ಎಂಟು ಹಳ್ಳಿಗಳ ಮೇಲೆ ಪರಿಣಾಮ ಬೀರಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಗುರುವಾರದಿಂದ ದನ, ನಾಯಿ, ಮೊಲ, ಬಾತುಕೋಳಿ, ಹುಂಜ ಮತ್ತು ಗಿನಿಪಿಗ್ ಸೇರಿದಂತೆ ಸುಮಾರು 6,000 ಪ್ರಾಣಿಗಳನ್ನು ಸಹ ಮುಳುಗಿರುವ ಪ್ರದೇಶಗಳಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷ 45 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿರುವ ಯಮುನಾ ನದಿಯ ನೀರಿನ ಮಟ್ಟವು ಇಂದು 207.68 ಮೀಟರ್‌ಗೆ ಇಳಿದಿದ್ದರೂ ಅಪಾಯದ ಗಡಿಯಿಂದ ಇದು ಇನ್ನೂ ಎರಡು ಮೀಟರ್ ಮೇಲಿದೆ. ನೆರೆಯ ದೆಹಲಿಯಲ್ಲಿ, ಐಟಿಒ ಮತ್ತು ರಾಜ್‌ಘಾಟ್ ಸೇರಿದಂತೆ ನಗರದ ಪ್ರಮುಖ ಪ್ರದೇಶಗಳು ನೀರಿನಲ್ಲಿ ಮುಳುಗಿದ್ದರಿಂದ ನಿನ್ನೆ ಸೇನಾಪಡೆಯನ್ನು ಕರೆಸಲಾಗಿತ್ತು.
ಪ್ರವಾಹದ ನೀರನ್ನು ಹೊರಹಾಕಲು ಯಮುನಾ ಬ್ಯಾರೇಜ್‌ನ ಐದು ಗೇಟ್‌ಗಳನ್ನು ತೆರೆಯುವ ಕೆಲಸ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. “ಐಟಿಒ ಬ್ಯಾರೇಜ್‌ನ ಮೊದಲ ಜಾಮ್ಡ್ ಗೇಟ್ ತೆರೆಯಲಾಗಿದೆ. ಶೀಘ್ರದಲ್ಲೇ ಎಲ್ಲಾ ಐದು ಗೇಟ್‌ಗಳನ್ನು ತೆರೆಯಲಾಗುವುದು.ಯಮುನಾ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ, ಮಳೆಯಾಗದಿದ್ದರೆ ಪರಿಸ್ಥಿತಿ ಶೀಘ್ರದಲ್ಲೇ ಸಾಮಾನ್ಯವಾಗಲಿದೆ, ಮಳೆಯಾದರೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.