ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಕಾರ್ಖಾನೆಗಳು ಮತ್ತು ಕಂಪನಿಗಳು ಪರಿಸರ ಮಾಲಿನ್ಯಕ್ಕೆ ಹೆಚ್ಚು ಕಾರಣವಾಗುತ್ತಿದೆ. ಹಿಂದಿನ ಕಾಲದಲ್ಲಿ ನಮ್ಮ ಭೂಮಿಯಲ್ಲಿ ಮಾಲಿನ್ಯ ಮುಕ್ತ ವಾತಾವರಣವಿತ್ತು. ಪರಿಸರ ನಮಗಾಗಿ ಇದ್ದು ಅದನ್ನು ಉಳಿಸಿ ಬೆಳೆಸೋಣ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹವಗಿ ಗ್ರಾಮ ಪಂಚಾಯತ್ ಗ್ರಾಮೀಣಾಭಿವೃದ್ಧಿ ಅಧಿಕಾರಿ ಅನುಪಮಾ ಬೆನ್ನೂರ ಅವರು ಕರೆ ನೀಡಿದರು.
ಅವರು ಇಂದು ಶನಿವಾರ ಹಳಿಯಾಳ ಅರಣ್ಯ ಇಲಾಖೆಯ ಆಶ್ರಯದಡಿ ಕೇರವಾಡದಲ್ಲಿ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಳಿಯಾಳ ಉಪ ವಲಯ ಅರಣ್ಯಾಧಿಕಾರಿ ಪರಶುರಾಮ ಹುದ್ದಾರ ಅವರು ಮಾತನಾಡಿ ಇವತ್ತಿನ ದಿನಗಳಲ್ಲಿ ಗಿಡಗಳನ್ನು ಬೆಳೆಸುವುದಕ್ಕಿಂತ ಗಿಡ ಮರಗಳ ನಾಶವೇ ಹೆಚ್ಚಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಸೇರಿದಂತೆ ನಾವು ನೀವೆಲ್ಲರೂ ನಮ್ಮ ನಮ್ಮ ಮನೆಯ ಸುತ್ತುಮುತ್ತಲು ಗಿಡಗಳನ್ನು ನೆಟ್ಟು ಬೆಳಸಬೇಕೆಂದು ತಿಳಿಸಿದರು.
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಯೋಜನಾಧಿಕಾರಿ ಸಂತೋಷ ಪರೀಟ, ಸ್ಥಳೀಯ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ ಗೌಡ, ಸದಸ್ಯ ಹನುಮಂತ ನಿಂಗನಗೌಡ, ಶಾಲಾ ಮುಖ್ಯೋಪಾಧ್ಯಾಯ ಸುನಿತಾ ಹುಲಸ್ವಾರ ಹಾಗೂ ಶಾಲಾ ಶಿಕ್ಷಕಿಯರು, ಸ್ವ ಸಹಾಯ ಸಂಘಗಳ ಸಂಘದ ಸದಸ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ, ಸರಕಾರಿ ಹಿರಿಯ ಪ್ರಾಥಮೀಕ ಶಾಲೆ ಕೇರವಾಡ ಮತ್ತು ಗ್ರಾಮ ಪಂಚಾಯತ್, ಹವಗಿ ಇವರ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಜಾತಿಯ ಗಿಡಗಳನ್ನು ನೆಡಲಾಯ್ತು.