ಅಂಕೋಲಾ: ಜಿಲ್ಲೆಯಲ್ಲಿ ಐಆರ್ ಬಿ ಕಾಮಗಾರಿ ಆರಂಭವಾಗಿ ಹಲವು ವರ್ಷಗಳೇ ಕಳೆದಿವೆ. ಆದರೂ ಐಆರ್ ಬಿ ಅದ್ವಾನಗಳು ಸದ್ಯಕ್ಕಂತೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಸದ್ಯಕ್ಕೆ ಜಿಲ್ಲೆಯ ಟೋಲ್ ಗೇಟ್ ಬಂದ್ ಮಾಡುವ ಸಂಬಂಧ ನಡೆಯುತ್ತಿರುವ ವಿದ್ಯಮಾನಗಳು ಸಾರ್ವಜನಿಕರಿಗೆ ಕಿರಿಕಿರಿ ಎನಿಸಿವೆ. ಅಸಮರ್ಪಕ ಮತ್ತು ಅಪೂರ್ಣ ಕಾಮಗಾರಿ ಕಾರಣ ಟೋಲ್ ಗೇಟ್ ಬಂದ್ ಮಾಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಖಡಕ್ ಎಚ್ಚರಿಕೆ ನೀಡಿದ್ದರು. ಸಚಿವರ ಆದೇಶಕ್ಕೆ ಸಮ್ಮತಿ ನೀಡದೇ ತಾಲ್ಲೂಕಿನ ಹಟ್ಟಿಕೇರಿ ಬಳಿಯ ಟೋಲ್ ಗೇಟ್ ನಲ್ಲಿ ಶುಲ್ಕ ವಸೂಲಿ ಮುಂದುವರಿಸಿಕೊಂಡು ಬರಲಾಗಿತ್ತು. ಈ ಕುರಿತು ರವಿವಾರ ರಾತ್ರಿ ಸಚಿವರ ಖಡಕ್ ವೈಖರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಸ್ಪಂದನೆ ಸಿಕ್ಕಿದ್ದು, ಜನ ಪ್ರಸಂಶೆ ವ್ಯಕ್ತಪಡಿಸಿದ್ದರು. ಆದರೆ ಸೋಮವಾರ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಟೋಲ್ ವಸೂಲಿ ಬಂದ್ ಆಗದ ಹಿನ್ನಲೆ ಟ್ರೋಲ್ ಮಾಡಲಾಗಿತ್ತು.
ಮಂಗಳವಾರ ಮುಂಜಾನೆ ಕಾರವಾರ ಅಂಕೋಲಾ ಶಾಸಕ ಸತೀಶ್ ಸೈಲ್ ನೇತೃತ್ವದಲ್ಲಿ ಕಾಂಗ್ರೆಸ್ ಹಟ್ಟಿಕೇರಿ ಬಳಿಯ ಟೋಲ್ ಗೇಟ್ ಬೃಹತ್ ಪ್ರತಿಭಟನೆ ನಡೆಸಿ ಟೋಲ್ ಶುಲ್ಕ ವಸೂಲಿ ಬಂದ್ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹೋದ ಮಾನ ಪ್ರತಿಭಟನೆಯಲ್ಲಿ ತಂದುಕೊಂಡಿತ್ತು.
ಜನ ಪ್ರತಿನಿಧಿಗಳ ಪ್ರತಿಭಟನೆಯ ಕಾವು ತಣ್ಣಗಾಗುವರೆಗೆ ಕಾದ ಐಆರ್ ಬಿ ಅಧಿಕಾರಿಗಳು ಮಂಗಳವಾರ ರಾತ್ರಿಯೇ ಮತ್ತೆ ಹಟ್ಟಿಕೇರಿ ಬಳಿಯ ಟೋಲ್ ಗೇಟ್ ನಲ್ಲಿ ಶುಲ್ಕ ವಸೂಲಿ ಆರಂಭಿಸಿ ಚಮಕ್ ನೀಡಿದ್ದಾರೆ. ಸಚಿವರ ಆದೇಶ ಶಾಸಕರ ಪ್ರತಿಭಟನೆ ಯಾವುದಕ್ಕೂ ಸ್ಪಂದನೆ ಸಿಕ್ಕಿಲ್ಲ ಎಂದು ಜನರು ಅಡಿಕೊಳ್ಳುವಂತೆ ಆಗಿದೆ.