ಮೃತ ಡಿ.ಆರ್.ಎಫ್.ಓ ಯೋಗೇಶ್ ನಾಯ್ಕ ಅವರಿಗೆ ಹಳಿಯಾಳದಲ್ಲಿ ಅಂತಿಮ ಗೌರವ ಸಲ್ಲಿಕೆ

ಹಳಿಯಾಳ : ದೇಹದೊಳಗೆ ಅಪಾಯಕಾರಿ ವಿಷ ಸೇರಿ ಚಿಂತಾಜನಕ ಸ್ಥಿತಿಯಲ್ಲಿದ್ದು, ಚಿಕಿತ್ಸೆ ಫಲಕಾರಿಯಾಗದೆ ಹುಬ್ಬಳ್ಳಿಯ ಸುಚಿರಾಯ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ, ದಾಂಡೇಲಿ ತಾಲ್ಲೂಕಿನ ಕುಳಗಿ ಅರಣ್ಯ ಶಾಖೆಯ ಉಪ ವಲಯಾರಣ್ಯಾಧಿಕಾರಿ ಯೋಗೇಶ್ ನಾಯ್ಕ ಅವರಿಗೆ ಹಳಿಯಾಳ ಪಟ್ಟಣದಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಾಲಯದ ಆವರಣದಲ್ಲಿ ಅಂತಿಮ ಗೌರವ ಸಲ್ಲಿಸಲಾಯ್ತು.

ನಿನ್ನೆ ಸಂಜೆಯೆ ಮೃತಪಟ್ಟಿದ್ದ ಯೋಗೇಶ್ ನಾಯ್ಕ ಅವರ ಮೃತದೇಹವನ್ನು ಇಂದು ಶನಿವಾರ ಹುಬ್ಬಳ್ಳಿಯಿಂದ ಬೆಳಿಗ್ಗೆ 7 ಗಂಟೆಗೆ ಹಳಿಯಾಳದಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕಾರ್ಯಾಲಯದ ಆವರಣಕ್ಕೆ ತರಲಾಯ್ತು. ಈ ಸಂದರ್ಭದಲ್ಲಿ ಮೃತ ಯೋಗೇಶ್ ನಾಯ್ಕ ಅವರ ಮೃತದೇಹಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ಎಚ್.ಬಾಲಚಂದ್ರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಕೆ.ಶೇಟ್ ಸೇರಿದಂತೆ ಹಳಿಯಾಳ ಉಪ ವಿಭಾಗದ ವ್ಯಾಪ್ತಿಯ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಅಂತಿಮ ನಮನದೊಂದಿಗೆ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಟಿಂಬರ್ & ಕಾರ್ಪೆಂಟರ್ ಅಸೋಶಿಯೇಶನ್ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಗಣ್ಯಾತಿ ಗಣ್ಯರು, ಹಾಗೂ ಯೋಗೇಶ್ ನಾಯ್ಕ ಅವರ ಅಭಿಮಾನಿಗಳು ಗೌರವ ಸಲ್ಲಿಸಿದರು. ಈ ವೇಳೆ ಕುಟುಂಬಸ್ಥರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯ್ತು. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನೆಮಗನಂತೆ ಇದ್ದಂತಹ ಯೋಗೇಶ್ ಅವರನ್ನು ಕಳೆದುಕೊಂಡ ನೋವು ಒಂದೆಡೆಯಾದರೇ, ಸಹದ್ಯೋಗಿಗಳಿಗೆ ಆತ್ಮೀಯ ಸನ್ಮಿತ್ರನ ಅಗಲಿಕೆಯ ದುಖ:, ಇನ್ನೂ ಯೋಗೇಶ್ ನಾಯ್ಕ ಅವರ ಕುಟುಂಬಸ್ಥರ, ಬಂಧುಗಳ ಯಾತನೆ, ಆಕ್ರಂದನ ಮುಗಿಲು ಮುಟ್ಟಿತ್ತು. ಒಬ್ಬ ನಿಷ್ಟಾವಂತ, ವಾತ್ಸಲ್ಯಮಯಿ, ಜನಮುಖಿ ಮತ್ತು ಸಮಾಜಮುಖಿ ವ್ಯಕ್ತಿತ್ವದ ಮೂಲಕ ಕಳೆದ 13 ವರ್ಷಗಳಿಂದ ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದ ಯೋಗೇಶ್ ನಾಯ್ಕ ಅವರ ಸೇವೆ ಮತ್ತು ವ್ಯಕ್ತಿತ್ವ ಸದಾ ಸ್ಮರಣೀಯವಾಗಿದ್ದು, ಅವರ ಆತ್ಮಕ್ಕೆ ಚಿರಶಾಂತಿ ಪ್ರಾಪ್ತವಾಗಲಿ, ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಸ್ಥರಿಗೆ ಭಗವಂತ ದಯಪಾಲಿಸಲೆನ್ನುವುದೆ ಎಲ್ಲರ ಪ್ರಾರ್ಥನೆಯಾಗಿತ್ತು.