ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆಯ ಅವಾಂತರ – ಕಾಳಜಿ ಕೇಂದ್ರ ತೆರೆದ ಜಿಲ್ಲಾಡಳಿತ

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಇಂದು ಸಹ ಮುಂದುವರೆದಿದೆ. ಇದರಿಂದಾಗಿ ಕರಾವಳಿ ಭಾಗದ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಕಾರವಾರ ತಾಲೂಕಿನ ಬಿಣಗಾ, ಅರಗಾ ಭಾಗದಲ್ಲಿ ಗುಡ್ಡದಿಂದ ಹರಿದು ಬಂದ ನೀರು ಹೆದ್ದಾರಿ ಮತ್ತು ಮನೆಗಳಿಗೆ ನುಗ್ಗಿದೆ. ಬಿಣಗಾದಲ್ಲಿ ಮೂಡಲಮಕ್ಕಿ ಗ್ರಾಮದ ಸೇತುವೆ ಮುಳುಗಿ 300 ಮನೆಗಳಿಗೆ ಸಂಪರ್ಕ ಕಡಿತವಾಗಿದೆ. ಅರಗಾದ ನೌಕಾ ನೆಲೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೀರು ತುಂಬಿ ನೌಕಾ ನೆಲೆಯ ಹೆದ್ದಾರಿ ಪ್ರದೇಶ ಸಂಪೂರ್ಣ ಜಲಾವೃತವಾಗಿ ವಾಹನ ಸವಾರರು ಪರದಾಡುವಂತಾಗಿದೆ. ಕಾರವಾರದ ನೌಕಾನೆಲೆ ಭಾಗದ ಬೈತಕೋಲಿನಲ್ಲಿ ಗುಡ್ಡ ಕುಸಿತವಾಗಿದೆ. ನಗರದ ಪದ್ಮನಾಭ ನಗರ, ಕಾಯ್ಕಿಣಿ ರಸ್ತೆಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ವಸ್ತುಗಳು ನಾಶವಾಗಿದೆ. 

ಜಿಲ್ಲೆಯ ಕುಮಟಾದ ಹಂದಿಗೋಣ ಭಾಗದಲ್ಲಿ ಅಘನಾಶಿನಿ ನದಿಯಲ್ಲಿ ಪ್ರವಾಹವುಂಟಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ. ಈ ಹಿನ್ನಲೆಯಲ್ಲಿ ಕುಮಟಾದ ಹಂದಿಗೋಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ಜಿಲ್ಲಾಡಳಿತ ತೆರೆದಿದ್ದು, 6 ಜನ ಸಂತ್ರಸ್ಥರನ್ನು ಕಾಳಜಿ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.

ಭಟ್ಕಳದ ರಂಗಿನಕಟ್ಟಾ ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿ 66 ಜಲಾವೃತವಾಗಿದ್ದು, ವಾಹನ ಸಂಚಾರ ಸ್ತಬ್ದವಾಗಿದೆ. ಇನ್ನು ಗಾಳಿ ಮಳೆಗೆ ಭಟ್ಕಳದ ಶಿರಾಲಿಯ ಬೇಳೂರ್ ಬಾಯರ್ ಫ್ಯಾಕ್ಟರಿಯ ಮೇಲ್ಚಾವಣಿಯ ಶೀಟುಗಳು ಹಾರಿಹೋಗಿ ಮಳೆ ನೀರು ಯಂತ್ರೋಪಕರಣಗಳ ಮೇಲೆ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಇದಲ್ಲದೇ ಭಟ್ಕಳ ತಾಲೂಕಿನ ಹೆದ್ದಾರಿ ಭಾಗದ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದ್ದು, ಹಲವು ಮನೆಗಳು ಜಲಾವೃತವಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇನ್ನು ಹೊನ್ನಾವರದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಶರಾವತಿ ತೀರದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಗುಂಡ್ಲಬಾಳದ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದ್ದು, ತೋಟಗಳು ಜಲಾವೃತವಾಗಿದೆ. ಭಾರೀ ಮಳೆಯ ಹಿನ್ನೆಲೆ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ನೀಡಲಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆನೀಡಲಾಗಿದೆ. ಇನ್ನೂ ಮೂರು ದಿನ ಕರಾವಳಿ ಭಾಗದಲ್ಲಿ ಮಳೆ ಮುಂದುವರೆಯಲಿದ್ದು, ನದಿ ಪಾತ್ರದ ಜನರು ಬೇರಡೆ ಸ್ಥಳಾಂತರಗೊಳ್ಳಲು ಜಿಲ್ಲಾಡಳಿತ ಸೂಚನೆ ನೀಡಿದೆ.