ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾದ ಮರಿಯ ಕ್ರಿಸ್ತರಾಜ್ ಅವರಿಗೆ ವರ್ಗಾವಣೆ

ದಾಂಡೇಲಿ : ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾಗಿ ಕಳೆದ ಮೂರು ವರ್ಷ ಏಳು ತಿಂಗಳಿನಿಂದ ಅನುಪಮ ಸೇವೆ ಸಲ್ಲಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯ ಕ್ರಿಸ್ತರಾಜ್ ಅವರಿಗೆ ಧಾರವಾಡದ ಗುಂಗರಗಟ್ಟಿಯಲ್ಲಿರುವ ಕರ್ನಾಟಕ ಅರಣ್ಯ ಅಕಾಡೆಮಿಗೆ ವರ್ಗಾವಣೆಯಾಗಿದೆ.

ಶಿಸ್ತು ಮತ್ತು ಪ್ರಾಮಾಣಿಕತೆಯ ಮೂಲಕ ಗಮನ ಸೆಳೆದಿದ್ದ ಮರಿಯ ಕ್ರಿಸ್ತರಾಜ್ ಅವರು ತಮ್ಮ ಕಾರ್ಯವೈಖರಿಯ ಮೂಲಕ ಇಲಾಖೆಯ ಘನತೆಯನ್ನು ಹೆಚ್ಚಿಸಿದ್ದರು. ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿ ಹಲವಾರು ಸಮಸ್ಯೆಗಳು ಬಂದಾಗಲೂ ಅತ್ಯಂತ ತಾಳ್ಮೆಯಿಂದ, ಸಮಾಧಾನ ಚಿತ್ತದಿಂದ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆಗಾಗಿ ಸಾಕಷ್ಟು ಅಧ್ಯಯನ ಮಾಡಿರುವುದನ್ನು ಮತ್ತು ಮಾಡುತ್ತಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.

ಇಲಾಖೆಯ ಅಧಿಕಾರಗಳಿಗೆ ಮತ್ತು ಸಿಬ್ಬಂದಿಗಳಿಗೆ ಕಾಲಕಾಲಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಇಲಾಖೆಯ ಕಾರ್ಯ ಚಟುವಟಿಕೆಗಳ ಪರಿಣಾಮಕಾರಿ ಅನುಷ್ಟಾನಕ್ಕೆ ಮೊದಲ ಆಧ್ಯತೆಯನ್ನು ನೀಡುತ್ತಾ ಬಂದಿರುವ ಮರಿಯ ಕ್ರಿಸ್ತರಾಜ್ ಅವರು ಉನ್ನತ ದರ್ಜೆಯ ಅಧಿಕಾರಿಯಾಗಿದ್ದರೂ ಎಲ್ಲರನ್ನೂ ಸಹಿತವಾಗಿ ಸಮಾನ ದೃಷ್ಟಿಯಿಂದ ನೋಡಿಕೊಳ್ಳುವ ಮೂಲಕ ವನ್ಯಜೀವಿ ಇಲಾಖೆಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಅಭಿಮಾನಕ್ಕೆ ಪಾತ್ರರಾಗಿದ್ದರು. ನಗರದಲ್ಲಿ ಸಾಕಷ್ಟು ಸಂಗೀತ, ಕಲಾ ಪ್ರತಿಭೆಗಳನ್ನು ಮರಿಯ ಕ್ರಿಸ್ತರಾಜ್ ಅವರು ಪ್ರೋತ್ಸಾಹಿಸುತ್ತಾ ಬಂದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.