ಲಕ್ನೋ: ದಟ್ಟ ಕಾಡಿನ ನಡುವೆ ನಿರ್ಮಿಸಲ್ಪಟ್ಟ ರಸ್ತೆಗಳು ಪ್ರಾಣಿಗಳು ಹಾಗೂ ಮಾನವ ಸಂಘರ್ಷಕ್ಕೆ ಕಾರಣವಾಗುತ್ತಿವೆ. ಪ್ರಾಣಿಗಳು ಸಾಗುವವರೆಗೆ ತಾಳ್ಮೆಯಿಂದ ಕಾಯದ ಜನ ಅವುಗಳ ಅವಾಸಸ್ಥಾನದಲ್ಲಿ ಹವಾ ತೋರಲು ಯತ್ನಿಸುತ್ತಾರೆ. ಇದು ಕಾಡುಪ್ರಾಣಿಗಳನ್ನು ಕೆರಳಿಸಿ ದಾಳಿಗೆ ಮುಂದಾಗುವಂತೆ ಮಾಡುತ್ತದೆ. ಅಪರೂಪಕ್ಕೆ ಕಾಡುಪ್ರಾಣಿಗಳನ್ನು ನೋಡಿ ತಮ್ಮ ಪಾಡಿಗೆ ತಾವು ಹೋಗದೇ ಅವುಗಳ ಫೋಟೋ ತೆಗೆಯಲು ಮುಂದಾಗುವ ಜನ ಅವುಗಳನ್ನು ಕೆರಳಿಸುತ್ತಾರೆ. ಇದರಿಂದ ಕಾಡು ಪ್ರಾಣಿಗಳು ಕಿರಿಕಿರಿಗೊಳಗಾಗಿ ದಾಳಿ ನಡೆಸುತ್ತವೆ. ಅದೇ ರೀತಿ ಈಗ ರಸ್ತೆ ಮಧ್ಯೆ ಸಿಕ್ಕ ಕಾಡಾನೆಗಳ ಹಿಂಡೊಂದರ ಜೊತೆ ಮೂವರು ವ್ಯಕ್ತಿಗಳು ಸೆಲ್ಫಿ ತೆಗೆಯಲು ಮುಂದಾಗಿದ್ದು, ಈ ವೇಳೆ ಸಿಟ್ಟಿಗೆದ್ದ ಗಜಪಡೆ ಮೂವರನ್ನು ಅಟ್ಟಾಡಿಸಿವೆ.
ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಸೆಲ್ಫಿಗಾಗಿ,ಇವರು ಮೂರ್ಖತನದ ಕೆಲಸಗಳನ್ನು ಬಹಳ ಉತ್ಸಾಹದಿಂದ ಮಾಡುತ್ತಾರೆ ಎಂದು ಐಎಫ್ಎಸ್ ಅಧಿಕಾರಿ ಬರೆದುಕೊಂಡಿದ್ದಾರೆ. ಉತ್ತರಪ್ರದೇಶದ ಲಖೀಂಪುರ ಖೇರಿಯಲ್ಲಿ ಈ ವೀಡಿಯೋ ಸೆರೆ ಆಗಿದೆ. ಮೂವರನ್ನು ಆನೆಗಳು ಓಡಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಡಿನ ಮದ್ಯೆ ಇರುವ ಟಾರು ಮಾರ್ಗದಲ್ಲಿ ಆನೆಗಳ ಹಿಂಡೊಂದು ಬರುತ್ತಿದ್ದು, ಇದನ್ನು ನೋಡಿದ ಮೂವರು ಅವುಗಳ ಮುಂದೆ ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಈ ಮೂವರ ಆಟವನ್ನು ನೋಡುವಷ್ಟು ನೋಡಿದ ಆನೆಗಳಿಗೆ ಕೊನೆಗೆ ಕೆರಳಲು ಶುರುವಾಗಿದ್ದು, ರಸ್ತೆಯಲ್ಲೇ ಈ ಮೂವರನ್ನು ಓಡಿಸಿಕೊಂಡು ಬಂದಿವೆ. ಈ ವೇಳೆ ಓಬ್ಬ ಟಾರ್ ರಸ್ತೆಯಲ್ಲೇ ಮುಗ್ಗರಿಸಿ ಬಿದ್ದಿದ್ದು, ಬಿದ್ದಲ್ಲಿಂದ ಎದ್ದು ಓಡಿ ಮೂವರು ಜೀವ ಉಳಿಸಿಕೊಂಡಿದ್ದಾರೆ.
ಈ ಆನೆಗಳು ದುದ್ವಾಹುಲಿ ಸಂರಕ್ಷಿತಾರಣ್ಯದ ಮಾರ್ಗವಾಗಿ ನೇಪಾಳಕ್ಕೆ ಸಾಗುವ ವೇಳೆ ಈ ಘಟನೆ ನಡೆದಿದೆ. ಈ ಮೂವರ ಹಾವಳಿ ನೋಡಿ ಆನೆಗಳಿಗೆ ಪಿತ್ತ ನೆತ್ತಿಗೇರಿದ್ದು, ಓಡಿಸಲು ಶುರು ಮಾಡಿವೆ. ಈ ಮೂವರ ವೀಡಿಯೋವನ್ನು ಆ ರಸ್ತೆಯಲ್ಲೇ ಸಾಗುತ್ತಿದ್ದ ಕೆಲವರು ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಹಾಗೂ ಪ್ರಕರಥಿ ವೈಚಿತ್ರ್ಯದ ಅಪರೂಪದ ಹಲವು ವೀಡಿಯೋಗಳನ್ನು ಆಗಾಗ ಪೋಸ್ಟ್ ಮಾಡುತ್ತಾರೆ.