ರಾಜಸ್ಥಾನ: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಅಪ್ಪ ಮಗಳು ಕೆಳಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ನಡೆದಿದೆ. ನಿನ್ನೆ ಸಿರೋಹಿ ಜಿಲ್ಲೆಯ ಅಬು ರೋಡ್ ರೈಲ್ವೆ ಸ್ಟೇಷನ್‌ನಲ್ಲಿ ಘಟನೆ ನಡೆದಿದ್ದು, 35 ವರ್ಷದ ಅಪ್ಪ ಹಾಗೂ ಐದು ವರ್ಷದ ಮಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತರನ್ನು 35 ವರ್ಷ ಪ್ರಾಯದ ಭೀಮರಾವ್ ಹಾಗೂ ಅವರ 5 ವರ್ಷ ಪ್ರಾಯದ ಮಗಳು ಮೋನಿಕಾ ಭೀಮಾರಾವ್ ಎಂದು ಗುರುತಿಸಲಾಗಿದೆ. ಭೀಮರಾವ್ ತಮ್ಮ ಪತ್ನಿ ಹಾಗೂ ಅವಳಿ ಮಕ್ಕಳೊಂದಿಗೆ ರೈಲು ನಿಲ್ದಾಣಕ್ಕೆ ಬಂದಿದ್ದರು. ರಾಜಸ್ಥಾನದ ಪಾಲಿ ಜಿಲ್ಲೆಯ ಫಲ್ನಾ ಪ್ರದೇಶಕ್ಕೆ ಅವರು ಹೊರಟಿದ್ದು, ಇದಕ್ಕಾಗಿ ಸಬರ್‌ಮತಿ ಜೋಧ್‌ಪುರ್ ಪ್ಯಾಸೆಂಜರ್ ರೈಲನ್ನು ಹತ್ತಲು ಯತ್ನಿಸಿದ್ದಾರೆ. ಈ ವೇಳೆ ಅಪ್ಪ ಮಗಳು ಕಾಲು ಜಾರಿ ರೈಲಿನ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ. ಅಷ್ಟರಲ್ಲಾಗಲ್ಲೇ ಅವರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯಲ್ಲಿ ವೈದ್ಯರು ಘೋಷಿಸಿದ್ದಾರೆ.
ಅಪ್ಪ ಮಗಳ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗಿದ್ದು, ಕುಟುಂಬದವರ ರೋದನ ಮುಗಿಲು ಮುಟ್ಟಿತ್ತು. ಘಟನೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 174ರ ಅಡಿ ಪ್ರಕರಣ ದಾಖಲಿಸಲಾಗಿದೆ. ಚಲಿಸುವ ರೈಲನ್ನು ಹತ್ತದಂತೆ ಹಾಗೂ ರೈಲಿನಿಂದ ಇಳಿಯದಂತೆ ರೈಲು ನಿಲ್ದಾಣಗಳಲ್ಲಿ ಜನರಿಗೆ ಧ್ವನಿವರ್ಧಕದ ಮೂಲಕ ಆಗಾಗ ರೈಲ್ವೆ ಇಲಾಖೆಯೂ ಜಾಗೃತಿ ಮೂಡಿಸುತ್ತಲೆ ಇರುತ್ತದೆ. ಇದರ ಜೊತೆಗೆ ರೈಲ್ವೆ ಪೊಲೀಸರು ಕೂಡ ರೈಲು ನಿಲ್ದಾಣದಲ್ಲಿ ಗಸ್ತು ತಿರುಗುತ್ತಾ ಜನರನ್ನು ಎಚ್ಚರಿಸುತ್ತಲೇ ಇರುತ್ತಾರೆ. ಹೀಗಿದ್ದೂ ಕೂಡ ಜನ ಜೀವದ ಹಂಗು ತೊರೆದು ಚಲಿಸುವ ರೈಲನ್ನು ಏರುವ ಇಳಿಯುವ ಸಾಹಸ ಮಾಡಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿ ಆಗಿದೆ.