ನಾಗಾಲ್ಯಾಂಡ್(ಜು.05) ದೇಶದ ಹಲವು ರಾಜ್ಯದಲ್ಲಿ ಭಾರಿ ಮಳೆ ಹಾಗೂ ಪ್ರವಾಹ ಸೃಷ್ಟಿಯಾಗಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡರೆ, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇತ್ತ ಪರ್ವತ ಪ್ರದೇಶಗಳು ಭೂಕುಸಿತಕ್ಕೆ ಸಿಲುಕಿ ತೀವ್ರ ಸಂಕಷ್ಟ ಅನುಭವಿಸುತ್ತಿದೆ. ನಾಗಾಲ್ಯಾಂಡ್‌ನಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಚಮೌಕಿದುಮಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 29ರಲ್ಲಿ ಭಾರಿ ಮಳೆಯಿಂದ ವಾಹನಗಳು ನಿಧಾನವಾಗಿ ಚಲಿಸುತ್ತಿತ್ತು. ರಸ್ತೆ ಸಂಪೂರ್ಣ ನೀರು ಹಾಗೂ ಕೊಚ್ಚಿ ಬಂದ ಕಲ್ಲು ಮಣ್ಣುಗಳಿಂದ ತುಂಬಿತ್ತು. ಇದೇ ವೇಳೆ ಭೂಕುಸಿತ ಸಂಭವಿಸಿದೆ. ಇದರ ಪರಿಣಾಮ ಭಾರಿ ಗಾತ್ರದ ಬಂಡೆಯೊಂದು ವಾಹನದ ಮೇಲೆ ಉರುಳಿದೆ. ಮೂರು ಕಾರುಗಳು ಸಂಪೂರ್ಣ ಅಪ್ಪಚ್ಚಿಯಾಗಿದೆ. ಈ ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭೀಕರತೆಯನ್ನು ಸಾರಿ ಹೇಳುತ್ತಿದೆ.
ನಾಗಾಲ್ಯಾಂಡ್‌ನ ರಾಷ್ಟ್ರೀಯ ಹೆದ್ದಾರಿ 29 ಪರ್ವತ ಪದೇಶಗಳಲ್ಲಿ ಹಾದು ಹೋಗುತ್ತದೆ. ಅದರಲ್ಲೂ ಚಮೌಕಿದುಮಾ , ದಿಮಾಪುರಾ, ಕೊಹಿಮಾ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಪದೇ ಪದೇ ಭೂಕುಸಿತ ಸಂಭವಿಸುತ್ತಿದೆ. ಈಶಾನ್ಯ ಭಾರತದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಭೂಕುಸಿತಗಳು ಹೆಚ್ಚಾಗಿದೆ.
ರಸ್ತೆಯಲ್ಲಿ ಮಳೆ ನೀರು ತುಂಬಿಕೊಂಡ ಕಾರಣ ವಾಹನಗಳು ರಸ್ತೆಯಲ್ಲಿ ನಿಂತಿತ್ತು. ನಿಧಾನವಾಗಿ ರಸ್ತೆ ನೀರು ದಾಟುತ್ತಿತ್ತು. ರಾಷ್ಟ್ರೀಯ ಹೆದ್ದಾರಿ 29ರಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿತ್ತು. ಸಾಲು ಗಟ್ಟಿ ವಾಹನಗಳು ನಿಂತಿತ್ತು. ಸರಕು ತುಂಬಿದ ಲಾರಿ, ಬಸ್, ಕಾರುಗಳಿಂದ ರಸ್ತೆ ತುಂಬಿತ್ತು. ಇದೇ ವೇಳೆ ದಿಢೀರ್ ಆಗಿ ಬಲಭಾಗದ ಪರ್ವತದಲ್ಲಿ ಭೂಕುಸಿತ ಸಂಭವಿಸಿದೆ.
ಭೂಕುಸಿತದಲ್ಲಿ ಭಾರಿ ಗಾತ್ರದ ಬಂಡೆಯೊಂದು ಮೇಲಿನಿಂದ ಉರುಳಿ ಕಾರಿನ ಮೇಲೆ ಬಿದ್ದಿದೆ. ಮೊದಲ ಕಾರು ಸಂಪೂರ್ಣ ಅಪ್ಪಚ್ಚಿಯಾಗಿದೆ. ಇತ್ತ ಅದೇ ಬಂಡೆ ಮತ್ತೊಂದು ಕಾರನ್ನು ಪಲ್ಟಿ ಮಾಡಿ ಅಪ್ಪಚ್ಚಿ ಮಾಡಿದೆ. ರಸ್ತೆ ಬದಿಯಲ್ಲಿನ ತಡೆಗೋಡೆಯಿಂದ ಕಾರು ಪ್ರಪಾತಕ್ಕೆ ಉರುವುದು ತಪ್ಪಿದೆ. ಇತ್ತ ಮತ್ತೊಂದು ಬಂಡೆ ನೇರವಾಗಿ ಮೂರನೇ ಕಾರಿನ ಮೇಲೆ ಬಿದ್ದಿದೆ.ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ.
ಈ ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಒರ್ವ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊರ್ವ ಆಸ್ಪತ್ರೆ ದಾಖಲಿಸಿದ ಬೆನ್ನಲ್ಲೇ ಮೃತಪಟ್ಟಿದ್ದಾರೆ. ಇನ್ನು ಮೂವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇದೀಗ ನಾಗಾಲ್ಯಾಂಡ್ ಚಮೌಕಿದುಮಾ ಜಿಲ್ಲೆಯ ಬಳಿಯ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ಭೂಕುಸಿತ ಸಂಭವಿಸುತ್ತಿರುವ ಕಾರಣ, ಅಪಾಯದ ಮಟ್ಟ ಹೆಚ್ಚಿದೆ. ಹೀಗಾಗಿ ರಸ್ತೆ ಸಂಚಾರ ಬಂದ್ ಮಾಡಲಾಗಿದೆ.
ನಾಗಾಲ್ಯಾಂಡ್ ಸರ್ಕಾರ ತುರ್ತು ಸಭೆ ನಡೆಸಿದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದೆ. ಇತ್ತ ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಇತ್ತ ಹಲವೆಡೆ ಭೂಕುಸಿತ ಸಂಭವಿಸುವ ಅಪಾಯವಿರುವ ಕಾರಣ ರಕ್ಷಣಾ ತಂಡಗಳನ್ನು ಕಳುಹಿಸಲಾಗಿದೆ. ಅಪಾಯದ ಮಟ್ಟ ಹೆಚ್ಚಿರುವ ಹೆದ್ದಾರಿಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ.