ಹಿಂದುತ್ವವಾದಿ ವ್ಯಕ್ತಿ ಅಧ್ಯಕ್ಷ, ವಿಪಕ್ಷ ನಾಯಕ ಆಗಲಿ: ಕೆ.ಎಸ್‌.ಈಶ್ವರಪ್ಪ

ಬೆಂಗಳೂರು (ಜು.05): ಯಾವುದೇ ಹೊಂದಾಣಿಕೆಗೆ ಬಗ್ಗದ, ಮುಲಾಜಿಗೊಳಗಾಗದ ಹಿಂದುತ್ವವಾದಿ ವ್ಯಕ್ತಿಗಳು ಪ್ರತಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷ ಹುದ್ದೆಗೆ ಆಯ್ಕೆಯಾಗಬೇಕು. ಅಂತಹ ವ್ಯಕ್ತಿಯನ್ನೇ ಆಯ್ಕೆ ಮಾಡಲಾಗುತ್ತದೆ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ. 

ಮಂಗಳವಾರ ಬಿಜೆಪಿ ಕಚೇರಿಯಲ್ಲಿ ವೀಕ್ಷಕರಿಗೆ ತಮ್ಮ ಅಭಿಪ್ರಾಯ ತಿಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ನಾವು ಅಂಕಿ ಸಂಖ್ಯೆಯಲ್ಲಿ ಸೋತಿದ್ದೇವೆಯೇ ಹೊರತು ಶೇಕಡಾವಾರಿನಲ್ಲಿ ಅಲ್ಲ. ಕಳೆದ ಬಾರಿ ಶೇ.36ರಷ್ಟು ಮತದಾನ ಪ್ರಮಾಣ ತೆಗೆದುಕೊಂಡಿದ್ದರೆ, ಈ ಬಾರಿ ಶೇ.36.6ರಷ್ಟುಮತದಾನ ಪ್ರಮಾಣವನ್ನು ತೆಗೆದುಕೊಂಡಿದ್ದೇವೆ. ಇಡೀ ಹಿಂದುತ್ವದ ಮೂಲಕ ಬಿಜೆಪಿ ಮತ್ತು ಸಂಘಟನೆ ಬೆಳೆದಿದೆ. ಇದರ ಆಧಾರದ ಮೇಲೆಯೇ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಉತ್ತರ ಕರ್ನಾಟಕದಲ್ಲಿ ಪಕ್ಷವು ಯಾವಾಗಲೂ ಹೆಚ್ಚಿನ ಮತದಾನ ಪಡೆದುಕೊಳ್ಳುತ್ತದೆ. ಈ ಬಾರಿ ಉತ್ತರ ಕರ್ನಾಟಕದ ಜತೆಗೆ ದಕ್ಷಿಣ ಕರ್ನಾಟಕದಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಗೆಲುವು ಸಾಧಿಸಿದ್ದೇವೆ. ಲಿಂಗಾಯತ ಬೆಲ್ಟ್‌ನಲ್ಲಿಯೂ ಅಧಿಕ ಪ್ರಮಾಣ ಪಡೆಯಲಾಗಿದ್ದು, ಒಕ್ಕಲಿಗ ಬೆಲ್ಟ್‌ನಲ್ಲಿಯೂ ಕೈ ಹಾಕಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಪಕ್ಷಕ್ಕಿದೆ. ಪ್ರತಿಪಕ್ಷ ನಾಯಕನ ಜತೆಗೆ ರಾಜ್ಯಾಧ್ಯಕ್ಷನನ್ನು ಆಯ್ಕೆ ಮಾಡಿ ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟುಬಲವರ್ಧನೆ ಮಾಡುತ್ತೇವೆ. ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರಕ್ಕೆ ತರುತ್ತೇವೆ ಎಂದರು.

ಡಿಸೆಂಬರ್‌ಗೆ ಗ್ಯಾರಂಟಿಯ ವಾರಂಟಿ ಅಂತ್ಯ: ಈ ಗ್ಯಾರಂಟಿ ಸರ್ಕಾರದ ವಾರಂಟಿ ಮುಂದಿನ ಡಿಸೆಂಬರ್‌ಗೆ ಮುಗಿಯಲಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.  ಬಿಜೆಪಿ ಹೋರಾಟದಿಂದ ಬಂದ ಪಕ್ಷ. ಸ್ವಾತಂತ್ರ್ಯ ಹೋರಾಟದ ಹೆಸರಿನಿಂದ ಕಾಂಗ್ರೆಸ್‌ 50 ವರ್ಷ ದೇಶವನ್ನು ಲೂಟಿ ಮಾಡಿದೆ. ಸಿದ್ದರಾಮಯ್ಯಗೆ ಎದ್ದು ನಿಂತು ಮಾತನಾಡುವ ನೈತಿಕತೆ ಉಳಿದಿಲ್ಲ. ವಿಧಾನಸಭೆಯಲ್ಲಿ ಡಿ.ಕೆ.ಶಿವಕುಮಾರ್‌ ಎಲ್ಲದಕ್ಕೂ ಎದ್ದು ನಿಂತು ಮಾತನಾಡಲು ಬರುತ್ತಾರೆ. 

ಅವರು ಯಾವಾಗ ಸಿಎಂ ಕುರ್ಚಿ ಖಾಲಿ ಖಾಲಿಯಾಗಲಿದೆ ಎಂದು ಕಾಯುತ್ತಿದ್ದಾರೆ. ಸಿದ್ದರಾಮಯ್ಯ ಕುರ್ಚಿ ಖಾಲಿ ಮಾಡುವುದಿಲ್ಲ. ಡಿ.ಕೆ.ಶಿವಕುಮಾರ್‌ ರಾಜ್ಯದ ಸಿಎಂ ಆಗುವುದಿಲ್ಲ. ಇದು ಗ್ಯಾರಂಟಿ ಭವಿಷ್ಯ ಎಂದು ವ್ಯಂಗ್ಯವಾಗಿ ಟೀಕಿಸಿದರು. ಎಷ್ಟು ದಿನ ರಾಜ್ಯದ ಜನತೆಗೆ ಮೋಸ ಮಾಡಲು ಸಾಧ್ಯ? ಉಚಿತ ಎಂದ ದಿಲ್ಲಿ ದಿವಾಳಿಯಾಗಿದೆ. ಪಂಜಾಬ್‌ ದಿವಾಳಿಯಾಗಿದೆ. ಈ ಉಚಿತ-ಖಚಿತದ ಸರ್ಕಾರ ಮನೆಗೆ ಹೋಗುವುದು ನಿಶ್ಚಿತ ಎಂದು ರಾಜ್ಯ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.