ಭೋಪಾಲ್: ಮಕ್ಕಳು ತಪ್ಪು ಮಾಡಿದಾಗ ಎರಡೇಟು ನೀಡಿ ಇದು ತಪ್ಪು ಎಂದು ಹೇಳಿ ಬುದ್ದಿ ಹೇಳಬೇಕು. ಎಳವೆಯಲ್ಲೇ ತಪ್ಪು ಸರಿಗಳ ನಡುವಿನ ವ್ಯತ್ಯಾಸ ಅವರಿಗೆ ತಿಳಿಸಬೇಕು. ಇಲ್ಲದಿದ್ದರೆ ಇಂತಹ ಸ್ಥಿತಿ ಬರುತ್ತೆ ನೋಡಿ. ಮಗನ ಬಂಧನವನ್ನು ತಪ್ಪಿಸುವುದಕ್ಕಾಗಿ ತಾಯಿಯೊಬ್ಬಳು ಪೊಲೀಸ್ ಕಾರಿನ ಬಾನೆಟ್‌ನಲ್ಲಿ ನೇತಾಡಿ ಮಗನ ಬಂಧನ ತಡೆಯಲು ಯತ್ನಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ಅಮ್ಮನ ಗೋಳಾಟಕ್ಕೆ ಪೊಲೀಸರೇನು ಕರಗಿಲ್ಲ, ಏಕೆಂದರೆ ಮಗ ಡ್ರಗ್ ಪೆಡ್ಲರ್ ಎಂಬುದು ಪೊಲೀಸರ ಆರೋಪ.
ಮಕ್ಕಳ ಮೇಲೆ ತಾಯಿಗೆ ಯಾರ ಮೇಲೂ ಇಲ್ಲದ ಪ್ರೀತಿ ಇರುತ್ತದೆ ಅವರು ಎಷ್ಟು ದೊಡ್ಡವರಾದರೂ ಹೆತ್ತಬ್ಬೆಗೆ ಅವರಿನ್ನು ಕೂಸುಗಳೇ, ಕೆಲವು ಪೋಷಕರು ಮಕ್ಕಳ ತಪ್ಪಿಗೂ ಮಹಾಭಾರತದ ಗಾಂಧಾರಿಯಂತೆ ಅಂಧರಾಗಿಬಿಡುತ್ತಾರೆ. ನಂತರ ಅನ್ಯಾಯವಾಯ್ತು ಎಂದು ಗೋಳಾಡಲು ಶುರು ಮಾಡುತ್ತಾರೆ. ಹಾಗೆಯೇ ಇಲ್ಲೊಬ್ಬಳು ತಾಯಿಯ ಮಗ ಡ್ರಗ್ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಮನೆಗೆ ಬಂದಿದ್ದಾರೆ. ಈ ವೇಳೆ ತಾಯಿ ಹೈಡ್ರಾಮಾ ಮಾಡಿದ್ದು, ನನ್ನ ಮಗ ಆರೋಪಿಯಲ್ಲ ಎಂದು ಪೊಲೀಸರೊಂದಿಗೆ ಜಗಳ ಮಾಡಲು ಶುರು ಮಾಡಿದ್ದಾಳೆ.
ಆದರೆ ಪೊಲೀಸರು ತಾಯಿಯ ಅಳಲಿಗೆ ಕರಗದೇ ಆತನನ್ನು ಕಾರಿನಲ್ಲಿ ತುಂಬಿಸಿ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಈ ವೇಳೆ ತಾಯಿ ಪೊಲೀಸ್ ಕಾರಿನ ಬಾನೆಟ್ ಮೇಲೆ ಬಿದ್ದು, ಮಗನ ಬಂಧನ ತಡೆಯಲೆತ್ನಿಸಿದ್ದಾರೆ. ಆದರೆ ಪೊಲೀಸರು ಕಾರು ನಿಲ್ಲಿಸದೇ ಕಾರಿನ ಬಾನೆಟ್ ಮೇಲೆ ನೇತಾಡಿದ್ದ ತಾಯಿಯನ್ನು ಸಹ ಠಾಣೆಗೆ ಕರೆತಂದಿದ್ದಾರೆ. ಮಧ್ಯಪ್ರದೇಶದ ನರಸಿಂಗ್ಪುರದಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಠಾಣೆಗೆ ಬಂದ ನಂತರವೇ ಪೊಲೀಸರು ಕಾರು ನಿಲ್ಲಿಸಿದ್ದು, ಮಗನ ಬಂಧನ ತಡೆಯಲೆತ್ನಿಸಿದ ತಾಯಿಯೂ ಠಾಣೆ ಸೇರಿದ್ದಾರೆ.
ನರಸಿಂಗಪುರದ ಗೋಟೆಗಾಂವ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಡ್ರಗ್ ಪೆಡ್ಲರ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ಮಹಿಳೆಯ ಮಗನನ್ನು ಪೊಲೀಸರು ಬಂಧಿಸಿದ್ದರು.
ಗ್ರಾಮದ ಹಲವು ಪ್ರದೇಶಗಳಲ್ಲಿ ಯುವಕರಿಗೆ ಡ್ರಗ್ ಪೂರೈಕೆಯಾಗುತ್ತಿರುವ ವಿಚಾರ ತಿಳಿದ ಪೊಲೀಸರು ಮಾರುವೇಷದಲ್ಲಿ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಇಬ್ಬರು ಯುವಕರು ಈ ಕಾರ್ಯದಲ್ಲಿ ಭಾಗಿಯಾಗಿದ್ದು, ಪೊಲೀಸರಿಗೆ ತಿಳಿದಿತ್ತು. ಇದರಲ್ಲಿ ಓರ್ವ ಈ ಮಹಿಳೆಯ ಮಗನಾಗಿದ್ದ. ಇನ್ನು ಹೀಗೆ ಪೊಲೀಸ್ ಕಾರಿನ ಬಾನೆಟ್ ಮೇಲೆ ಬಿದ್ದ ಮಹಿಳೆ ಆ ಪ್ರದೇಶದಲ್ಲಿ ಹೂ ಮಾರುವ ವ್ಯವಹಾರ ಮಾಡುತ್ತಿದ್ದಳು. ಇತ್ತ ಪೊಲೀಸರು ತನ್ನ ಮಗನನ್ನು ಕರೆದೊಯ್ಯುತ್ತಿರುವ ವಿಚಾರ ತಿಳಿದ ಆಕೆ ಕಾರಿನ ಬಾನೆಟ್ ಮೇಲೆ ಹಾರಿ ಕಾರನ್ನು ಮುಂದೆ ಹೋಗಲು ಬಿಡದೇ ತಡೆದಿದ್ದಾಳೆ. ಈ ವೇಳೆ ಪೊಲೀಸರು ಕಾರು ನಿಲ್ಲಿಸದೇ ಆಕೆಯನ್ನು ಸೀದಾ ಮಗನೊಂದಿಗೆ ಠಾಣೆಗೆ ಕರೆತಂದಿದ್ದಾರೆ. ಸುಮಾರು ಅರ್ಧ ಕಿಲೋ ಮೀಟರ್ ವರೆಗೂ ಮಹಿಳೆಯನ್ನು ಕಾರಿನ ಬಾನೆಟ್‌ನಲ್ಲೇ ನೇತಾಡಿಸಿಕೊಂಡು ಪೊಲೀಸರು ಠಾಣೆಗೆ ತಂದಿದ್ದಾರೆ.
ಅಲ್ಲದೇ ಸ್ಥಳೀಯ ಜನ ಈ ಘಟನೆಯನ್ನು ತಮ್ಮ ಮೊಬೈಲ್‌ಗಳಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ವೈರಲ್ ಆಗಿದ್ದು, ಕೆಲವರು ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಬಗ್ಗೆ ವಿಭಾಗೀಯ ತನಿಖೆ ನಡೆಸಲಾಗಿದ್ದು, ಅತ್ತ ಈ ಕೃತ್ಯವೆಸಗಿದ ಪೊಲೀಸರನ್ನು ಅಮಾನತು ಮಾಡಲಾಗಿದೆ. ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.