ಕಲಬುರಗಿ: ಕಳೆದ ಎರಡು ವರ್ಷಗಳಿಂದ ಮನೆಗಳ್ಳತನ ಮಾಡುತ್ತಿದ್ದ ಖತರ್ನಾಕ ಗ್ಯಾಂಗ್ ಒಂದನ್ನು ಪೊಲೀಸರು ಪತ್ತೆಮಾಡಿದ್ದು, ಕೊನೆಗೂ ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ 53 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದಾರೆ. ಕಲಬುರಗಿ ತಾಲೂಕಿನ ಸಾವಳಗಿ ಬಿ ಗ್ರಾಮದ ಶೀಲವಂತ, ಗಣೇಶ್ ಅಲಿಯಾಸ್ ಗಣ್ಯಾ ಪವಾರ್, ತಾಜಸುಲ್ತಾನಪುರ ಗ್ರಾಮದ ರಘು, ಮಲ್ಲಪ್ಪ ಬಂಧಿತರು. ಕಲಬುರಗಿ ಸಬ್ ಅರ್ಬನ್ ಉಪ ವಿಭಾಗದಲ್ಲಿ ಬರುವ ವಿಶ್ವವಿದ್ಯಾಲಯ, ಸಬ್ ಅರ್ಬನ್, ಮತ್ತು ಫರಹತಾಬಾದ್ ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಗ್ಯಾಂಗ್ನ್ನು ಬಂಧಿಸಿದ್ದಾರೆ.
ನಾಲ್ವರು ಕಲಬುರಗಿ ತಾಲೂಕಿನವರೇ ಆಗಿದ್ದರು ಕೂಡಾ ಹೆಚ್ಚಾಗಿ ಮಹರಾಷ್ಟ್ರದ ಸೊಲ್ಲಾಪುರ ಮತ್ತು ಪುಣೆಯಲ್ಲಿ ಇರುತ್ತಿದ್ದರು. ಹೌದು ಈ ಖತರ್ನಾಕ ಕಿಲಾಡಿಗಳು ಕಳೆದ ಎರಡ್ಮೂರ ವರ್ಷಗಳಿಂದ ಕಲಬುರಗಿ ನಗರದಲ್ಲಿ ಮನೆಗಳ್ಳತನ ಮಾಡೋದನ್ನೆ ತಮ್ಮ ಕೆಲಸ ಮಾಡಿಕೊಂಡಿದ್ದರು. ತಮ್ಮೂರಲ್ಲಿ ಇದ್ದರೆ, ಪೊಲೀಸರಿಗೆ ಸಿಕ್ಕಿ ಬೀಳುತ್ತೇವೆ ಅಂತ ತಿಳಿದು, ಮಹರಾಷ್ಟ್ರದ ಪುಣೆ, ಸೊಲ್ಲಾಪುರದಲ್ಲಿಯೇ ಹೆಚ್ಚಾಗಿ ಇರುತ್ತಿದ್ದರು. ಆಗಾಗ ಕಲಬುರಗಿಗೆ ಬಂದು ಮನೆಗಳ್ಳತನ ಮಾಡಿಕೊಂಡು ಮತ್ತೆ ಹೋಗುತ್ತಿದ್ದರಂತೆ.
ಕಲಬುರಗಿಗೆ ಬಂದಾಗ ಕೂಡಾ ಇವರು ಇರ್ತಿದ್ದದು, ಮನೆಗಳಲ್ಲಿ ಅಲ್ಲಾ, ಬದಲಾಗಿ ಹೊಲಗದ್ದೆಗಳಲ್ಲಿ. ಹಗಲೊತ್ತಿನಲ್ಲಿ ಹೊಲಗದ್ದೆಯಲ್ಲಿ ಇರ್ತಿದ್ದ ಕಿಲಾಡಿಗಳು, ರಾತ್ರಿ ಸಮಯದಲ್ಲಿ ನಗರಕ್ಕೆ ಬಂದು, ನಗರದ ಹೊರವಲಯದಲ್ಲಿರುವ ಬೀಗ ಹಾಕಿದ ಮನೆಗಳನ್ನೇ ಟಾರ್ಗೇಟ್ ಮಾಡಿ, ಸುಲಭವಾಗಿ ಮನೆಗಳ ಬೀಗವನ್ನು ಮುರಿದು ಕಳ್ಳತನ ಮಾಡುತ್ತಿದ್ದರಂತೆ.
ವಿಶೇಷವೆಂದರೆ ಮೈಮೇಲೆ ನೂರಾರು ಗ್ರಾಂ ಬಂಗಾರವಿದ್ದರು ಅದನ್ನು ಮುಟ್ಟುತ್ತಿರಲಿಲ್ಲವಂತೆ. ಬೀಗ ಹಾಕಿದ ಮನೆಗಳಲ್ಲಿ ಮಾತ್ರ ಕದಿಯುತ್ತಿದ್ದರಂತೆ. ಕಲಬುರಗಿಯಲ್ಲಿ ಚಿನ್ನಾಭರಣ ಕದ್ದು, ಮಹಾರಾಷ್ಟ್ರದಲ್ಲಿ ಮಾರಾಟ ಮಾಡುತ್ತಿದ್ದರಂತೆ. ವಿಚಿತ್ರವೆಂದರೆ, ಕದ್ದ ಚಿನ್ನಾಭರಣಗಳನ್ನು ಪ್ರತಿ ಗ್ರಾಂಗೆ ಹತ್ತರಿಂದ ಇಪ್ಪತ್ತು ಸಾವಿರಕ್ಕೆ ಮಾರಾಟ ಮಾಡುತ್ತಿದ್ದರಂತೆ. ಕಳ್ಳತನ ಮಾಡುವದನ್ನೇ ತಮ್ಮ ಪುಲ್ ಟೈಮ್ ಕೆಲಸ ಮಾಡಿಕೊಂಡಿದ್ದ ಖತರ್ನಾಕ ಕಳ್ಳರು, ನಿನ್ನೆ ಕಲಬುರಗಿ ನಗರದಲ್ಲಿ ಕಳ್ಳತನಕ್ಕೆ ಹೊಂಚು ಹಾಕಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಸದ್ಯ ಕಲಬುರಗಿ ಪೊಲೀಸರು ಕಳೆದ ಎರಡು ವರ್ಷಗಳಿಂದ ಜನರ ನಿದ್ದೆಗೆಡಿಸಿದ್ದ ಒಂದು ಗ್ಯಾಂಗ್ನ್ನು ಪತ್ತೆ ಮಾಡಿದ್ದಾರೆ. ಆದ್ರೆ ಇದೇ ರೀತಿ ಇನ್ನು ಕೆಲ ಗ್ಯಾಂಗ್ ಗಳು ಆಕ್ಟಿವ್ ಆಗಿದ್ದು, ಅವರನ್ನು ಪತ್ತೆ ಮಾಡಿ ಕಂಬಿ ಹಿಂದೆ ಕಳುಹಿಸುವ ಕೆಲಸವನ್ನು ಪೊಲೀಸರು ಮಾಡಬೇಕಿದೆ.